Karavali
ಡ್ರಗ್ಸ್ ಮುಕ್ತ, ಅಪರಾಧ ಮುಕ್ತ ಉಡುಪಿಗಾಗಿ ಕರೆ ನೀಡಿದ ವಾಲ್ಟರ್ ನಂದಳಿಕೆ
- Thu, Dec 19 2024 08:22:36 PM
-
ಉಡುಪಿ, ಡಿ.19(DaijiworldNews/AA): ಉಡುಪಿಯನ್ನು ಡ್ರಗ್ಸ್ ಮುಕ್ತ ಹಾಗೂ ಅಪರಾಧ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಶ್ರಮಿಸೋಣ ಎಂದು ದಾಯ್ಜಿವರ್ಲ್ಡ್ ಸಮೂಹ ಸಂಸ್ಥೆಗಳ ಸಂಸ್ಥಾಪಕ ವಾಲ್ಟರ್ ನಂದಳಿಕೆ ಕರೆ ನೀಡಿದ್ದಾರೆ.
ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ಡಿಸೆಂಬರ್ 19 ಬನ್ನಂಜೆಯ ನಾರಾಯಣ ಗುರು ಸಭಾಂಗಣದಲ್ಲಿ ನಡೆದ ಅಪರಾಧ ತಡೆ ಮಾಸ ಕಾರ್ಯಕ್ರಮದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನಾನು ಪೊಲೀಸ್ ಅಧಿಕಾರಿಯಾಗಬೇಕೆಂಬ ಕನಸು ಕಂಡಿದ್ದೆ. ಆದರೆ ಮಾರ್ಗದರ್ಶನ ಮತ್ತು ಪ್ರೋತ್ಸಾಹದ ಕೊರತೆಯಿಂದಾಗಿ ಅದು ಸಾಧ್ಯವಾಗಲಿಲ್ಲ. ಆದರೆ ನಂತರ ನನಗೆ ಚಲನಚಿತ್ರ ಮತ್ತು ಧಾರಾವಾಹಿಗಳಲ್ಲಿ ಪೊಲೀಸ್ ಅಧಿಕಾರಿಯಾಗಿ ನಟಿಸುವ ಅವಕಾಶಗಳು ನನಗೆ ಬಂದವು ಎಂದು ಹೇಳಿದರು.
ಮುಂದುವರೆದು ಸುರಕ್ಷತೆ ಮುಖ್ಯವಾಗಿದೆ. ಹೆಲ್ಮೆಟ್ ಧರಿಸಿದ್ದರಿಂದ ಅಪಘಾತದಲ್ಲಿ ಅರವಿಂದ ಬೋಳಾರ್ ಬದುಕುಳಿದರು. ಆದರೆ ಇನ್ನೂ ಕೆಲವರು ಹೆಲ್ಮೆಟ್ ಧರಿಸದೇ ಗಾಡಿ ಓಡಿಸುತ್ತಾರೆ. ಕೆಲವರನ್ನು ಪೊಲೀಸರು ತಡೆದು ನಿಲ್ಲಿಸಿದಾಗ ತಪ್ಪಿಸಿಕೊಂಡು ಓಡುತ್ತಾರೆ. ಇನ್ನೂ ಕೆಲವರು ಪೊಲೀಸರಿಗೆ ಅಗೌರವ ತೋರುತ್ತಾರೆ. ಇದು ಗಂಭೀರ ಅಪರಾಧವಾಗಿದೆ. ದುರದೃಷ್ಟವಶಾತ್ ಜನರಿಗೆ ಡಿಜಿಟಲ್ ಪರಿಕಲ್ಪನೆಗಳ ಬಗ್ಗೆ ತಿಳಿದಿರುವುದಿಲ್ಲ. ಇಂತಹ ನಿರ್ಲಕ್ಷ್ಯದ ಕಾರಣದಿಂದ ಕೋಟ್ಯಾಂತರ ನಷ್ಟ ಅನುಭವಿಸುತ್ತಾರೆ. ನೀವು ಮಾಡುವ ತಪ್ಪುಗಳಿಂದಾಗಿ ನಿಮ್ಮ ತಂದೆ-ತಾಯಿಗೆ ಮುಜುಗರ ಉಂಟಾಗುವುದನ್ನು ತಪ್ಪಿಸಿ. ನಾನು ಉಡುಪಿ ಪೊಲೀಸರ ಬಗ್ಗೆ ಹೆಮ್ಮೆಪಡುತ್ತೇನೆ ಎಂದು ತಿಳಿಸಿದರು.
ನಟ ಮತ್ತು ಹಾಸ್ಯನಟ ಅರವಿಂದ ಬೋಳಾರ್ ಮಾತನಾಡಿ, ನಾವು ಪೊಲೀಸರಿಗೆ ಎಂದಿಗೂ ಭಯಪಡಬಾರದು, ಅವರು ನಮ್ಮಲ್ಲಿ ಒಬ್ಬರು. ಪೊಲೀಸ್ ವೃತ್ತಿಯು ಶಿಸ್ತನ್ನು ಪ್ರತಿನಿಧಿಸುತ್ತದೆ. ಅಪರಾಧವನ್ನು ಶ್ರೀಮಂತರು ಮತ್ತು ಬಡವರು ಇಬ್ಬರೂ ಮಾಡುತ್ತಾರೆ. ನಾವು ತಪ್ಪನ್ನು ನೋಡುತ್ತೇವೆ ಆದರೆ ನಮ್ಮ ಅಥವಾ ನಮ್ಮ ಮಕ್ಕಳ ಸುರಕ್ಷತೆಯ ಭಯದಿಂದ ಅದನ್ನು ವರದಿ ಮಾಡಲು ಹಿಂಜರಿಯುತ್ತೇವೆ. ಇದು ತಪ್ಪು ಏಕೆಂದರೆ ನಮ್ಮ ನಿರ್ಲಕ್ಷ್ಯವು ಅನೇಕರ ದುಖಃಕ್ಕೆ ಕಾರಣವಾಗಬಹುದು. ಇದನ್ನು ತಡೆಗಟ್ಟಲು ನಾವು ಪೊಲೀಸರನ್ನು ಬೆಂಬಲಿಸಬೇಕು. ಹಾಗೂ ಅಪರಾಧ ನಡೆಯುತ್ತಿದ್ದರೆ ಕಣ್ಣು ಮುಚ್ಚಿ ಕೂರಬಾರದು. ಹಿಂದೆ, ಜನರು ರಸ್ತೆ ಅಪಘಾತಗಳನ್ನು ಪೊಲೀಸರಿಗೆ ತಿಳಿಸಲು ಭಯಪಡುತ್ತಿದ್ದರು. ಆದರೆ ಇಂದು ಮೊಬೈಲ್ ಸಾಕ್ಷö್ಯವಾನ್ನು ಒದಗಿಸುವ ಮೂಲಕ ತ್ವರಿತ ಕ್ರಮ ತೆಗೆದುಕೊಳ್ಳಬಹುದು. ಭವಿಷ್ಯದಲ್ಲಿ ಪ್ರತಿ ಮನೆಯಲ್ಲೂ ಸಿಸಿಟಿವಿ ಇರುತ್ತದೆ. ಜನಸಂಖ್ಯೆಯು ಹೆಚ್ಚಾದಂತೆ ಅಪರಾಧದ ಪ್ರಮಾಣವು ಹೆಚ್ಚಾಗುತ್ತದೆ ಎಂದರು.
ಬಳಿಕ ಮಾತನಾಡಿದ ಪೊಲೀಸ್ ಅಧೀಕ್ಷಕ ಅರುಣ್ ಕೆ ಅವರು, ಕರ್ನಾಟಕದಲ್ಲಿ ಪ್ರತಿ ವರ್ಷ ಅಪರಾಧ ತಡೆ ಮಾಸವನ್ನು ಡಿಸೆಂಬರ್ನಲ್ಲಿ ಆಚರಿಸಲಾಗುತ್ತದೆ. ಅಪರಾಧವನ್ನು ತಡೆಗಟ್ಟುವುದು ಕಾರ್ಯಕ್ರಮದ ಮುಖ್ಯ ಗುರಿಯಾಗಿದೆ. ಅಪರಾಧ ಪ್ರಮಾಣಗಳು ಹೆಚ್ಚುತ್ತಿವೆ ಮತ್ತು ಹೊಸ ರೂಪಗಳನ್ನು ಪಡೆಯುತ್ತಿವೆ. ಸೈಬರ್ ಕ್ರೈಮ್, ಆನ್ಲೈನ್ ಬೆಟ್ಟಿಂಗ್ ಮತ್ತು ಜೂಜಾಟಗಳು ಪೊಲೀಸ್ ಇಲಾಖೆಗೆ ಹೊಸ ಸವಾಲುಗಳಾಗಿವೆ. ಸಾರ್ವಜನಿಕರು ಪೊಲೀಸ್ ಅಧಿಕಾರಿಗಳೊಂದಿಗೆ ಸಹಕರಿಸಿದರೆ ಅಪರಾಧಗಳನ್ನು ತಡೆಯಬಹುದು. ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸಿದರೆ ಅದನ್ನು ತಡೆಯಬಹುದು. ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸಿದರೆ ಅದನ್ನು ತಡೆಯಬಹುದು. ಕಳ್ಳತನ ಮತ್ತು ಚೈನ್ ಸ್ನ್ಯಾಚಿಂಗ್ ಅನ್ನು ಮೂಲಭೂತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದರಿಂದ ತಡೆಯಬಹುದು. ಉಡುಪಿ ಜಿಲ್ಲೆಯಲ್ಲಿ ಪ್ರತಿ ವರ್ಷ ಸುಮಾರು 350 ಜನರು ಮಾರಣಾಂತಿಕ ಅಪಘಾತಗಳಿಂದ ಸಾವನ್ನಪ್ಪುತ್ತಿದ್ದಾರೆ. ವಾಹನಗಳನ್ನು ಚಾಲನೆ ಮಾಡುವಾಗ ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸುವುದರಿಂದ ಈ ಅಪಘಾತದ ಸಾವುಗಳನ್ನು ತಡೆಯಬಹುದು ಎಂದು ಅಭಿಪ್ರಾಯಪಟ್ಟರು.
ರೂಪದರ್ಶಿ ಸ್ಪೂರ್ತಿ ಶೆಟ್ಟಿ ಮಾತನಾಡಿ, ನಾನು ನನ್ನ ಸ್ಪರ್ಧೆಯ ವೃತ್ತಿಜೀವನವನ್ನು ಪ್ರಾರಂಭಿಸಿದಾಗ, ಅದು ಗ್ಲಾಮರ್ ಮತ್ತು ಸೌಂದರ್ಯಕ್ಕೆ ಸಂಬಂಧಿಸಿತ್ತು. ಆದರೆ ಕಾಲಾನಂತರದಲ್ಲಿ, ಇದು ಹೆಚ್ಚಿನ ಉದ್ದೇಶವನ್ನು ಹೊಂದಿದೆ ಎಂದು ನಾನು ಅರಿತುಕೊಂಡೆ. ಗಮನಕ್ಕೆ ಬಾರದೆ ಹಲವಾರು ಸಮಸ್ಯೆಗಳಿವೆ. ಉದಾಹರಣೆಗೆ, ಬಸ್ನಲ್ಲಿ ಪ್ರಯಾಣಿಸುವಾಗ, ಯಾರಾದರೂ ನಮ್ಮೊಂದಿಗೆ ಅನುಚಿತವಾಗಿ ವರ್ತಿಸಿದರೆ, ಅದು ಕ್ರಿಮಿನಲ್ ಅಪರಾಧವಾಗಿದೆ. ಜನರು ಅಂತಹ ಕೃತ್ಯಗಳನ್ನು ಚಿಕ್ಕದು ಎಂದು ತಳ್ಳಿಹಾಕುತ್ತಾರೆ. ಆದರೆ ಅದು ಒಬ್ಬರ ಮಾನಸಿಕ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಯಾರಾದರೂ ಅನುಚಿತವಾಗಿ ವರ್ತಿಸಿದರೆ ನೀವು ಎದ್ದು ನಿಂತು ತಪ್ಪು ಎಂದು ಹೇಳುವ ಧೈರ್ಯವನ್ನು ಹೊಂದಿರಬೇಕು. ಶೈಕ್ಷಣಿಕ ಪಠ್ಯಕ್ರಮದಲ್ಲಿ ಇಂತಹ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಬೇಕೆಂದು ನಾನು ಆಗ್ರಹಿಸುತ್ತೇನೆ ಎಂದರು.
ಮಿಸೆಸ್ ಅರ್ಥ್ ಇಂಟರ್ನ್ಯಾಷನಲ್ ಟೂರಿಸಂ 2024ರ ಡಾ.ಶ್ರುತಿ ಬಲ್ಲಾಳ್ ಅವರು ಮಾತನಾಡಿ, ಮದ್ಯಪಾನ, ಧೂಮಪಾನ ಮತ್ತು ಮಾದಕ ದ್ರವ್ಯಗಳು ಹಾನಿಕಾರಕವೆಂದು ತಿಳಿದಿದ್ದರೂ, ಅನೇಕರು ಇನ್ನೂ ಈ ಅಭ್ಯಾಸಗಳಲ್ಲಿ ತೊಡಗುತ್ತಾರೆ. ಕೆಲವರು ಚಟದಿಂದಾಗಿ ತಲೆನೋವಿಗೆ ಪ್ಯಾರಸಿಟಮಾಲ್ನಂತಹ ಔಷಧಿಗಳನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ. ನನಗೆ ಶಾಲೆಯಲ್ಲಿ ಕಲಿಸಿದ ಎಬಿಸಿಡಿ ಹೊಸ ಅರ್ಥವನ್ನು ಪಡೆಯುತ್ತದೆ. ಚಟಕ್ಕೆ ಎ, ವರ್ತನೆಯ ಬದಲಾವಣೆಗಳಿಗೆ ಬಿ, ಕಡುಬಯಕೆಗಳು ಮತ್ತು ಕುತೂಹಲಕ್ಕಾಗಿ ಸಿ, ಮತ್ತು ಅವಲಂಬನೆಗಾಗಿ ಡಿ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಅಪರಾಧ ಜಾಗೃತಿ ಪೋಸ್ಟರ್ ಅನ್ನು ಗಣ್ಯರು ಬಿಡುಗಡೆ ಮಾಡಿದರು.
ಸಿಇಎನ್ ಪೊಲೀಸ್ ಠಾಣೆಯ ರಾಮಚಂದ್ರ ನಾಯಕ್ ಮತ್ತು ಪೊಲೀಸ್ ಇನ್ಸ್ಪೆಕ್ಟರ್ ದೇವರಾಜ್ ಟಿ ವಿ ಅವರು ವಿವಿಧ ಅಪರಾಧ ಮತ್ತು ತಡೆಗಟ್ಟುವ ವಿಧಾನಗಳ ಬಗ್ಗೆ ವಿವರ ನೀಡಿದರು.
ದಿವಾಕರ್ ಪಿ ಕೆ ಸ್ವಾಗತಿಸಿದರು. ಅನಿತಾ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಡಿಎಸ್ಪಿ ಉಡುಪಿ ಪ್ರಭು ಡಿ ಟಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪಿ ಎ ಹೆಗಡೆ, ವಿವಿಧ ಸಂಸ್ಥೆಗಳ ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.