Karavali
ಬಂಟ್ವಾಳ: ಪುರಸಭೆಯ ಸಾಮಾನ್ಯ ಸಭೆ
- Thu, Dec 19 2024 09:32:36 PM
-
ಬಂಟ್ವಾಳ, ಡಿ.19(DaijiworldNews/AK): ಪುರಸಭೆಯ ಸಾಮಾನ್ಯ ಸಭೆ ಅಧ್ಯಕ್ಷ ವಾಸು ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಡಿ.19 ರಂದು ಗುರುವಾರ ಪುರಸಭೆಯ ಸಭಾಂಗಣದಲ್ಲಿ ನಡೆಯಿತು.
ಬಂಟ್ವಾಳ ಪುರಸಭೆಯ ಸ್ಥಿರಾಸ್ತಿ, ಚರಾಸ್ತಿಯ ದಾಖಲೆಯನ್ನು ಕಾಪಾಡುವ ಅಗತ್ಯವಿದೆ, ಇದೊಂದು ಗಂಭೀರ ವಿಚಾರ ಎಂದು ಹಿರಿಯ ಸದಸ್ಯ ಗೋವಿಂದ ಪ್ರಭು ಹೇಳಿದರು.ಯಾವ ದಾಖಲೆಗಳನ್ನು ಕೇಳಿದರೂ ಪುರಸಭೆಯಲ್ಲಿ ಸಿಗದಿದ್ದರೆ ಏನು ಮಾಡುವುದು, ನಮ್ಮ ಮನೆಯ ದಾಖಲೆಗಳು ನಮ್ಮ ಮನೆಯಲ್ಲಿವೆ, ಪುರಸಭೆ ದಾಖಲೆ ಎಲ್ಲಿವೆ ಎಂದು ಪ್ರಶ್ನಿಸಿದರು
ಪುರಸಭೆಯ ಸ್ತಿರಾಸ್ತಿ ಹಾಗೂ ಚರಾಸ್ತಿಯ ಬಗ್ಗೆ ದಾಖಲೆಗಳನ್ನು ಸುರಕ್ಷಿತವಾಗಿ ಕಾಪಾಡುವ ಗಂಭೀರವಾದ ವಿಚಾರದ ಬಗ್ಗೆ ಸದಸ್ಯರು ಒತ್ತಾಯ ಮಾಡಿದರು.ದಕ್ಣಿಣ ಕನ್ನಡ ಜಿಲ್ಲಾಧಿಕಾರಿ ಕಂಚಿನಡ್ಕಪದವಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಏನು ನಡೆಯಿತು ಎಂದು ಸದಸ್ಯ ಮಹಮ್ಮದ್ ಶರೀಫ್ ಪ್ರಶ್ನಿಸಿದರು.ಈ ಸಂದರ್ಭ ಜಿಲ್ಲಾಧಿಕಾರಿ ವಿಲೇವಾರಿ ಪ್ರಕ್ರಿಯೆ ಸಮರ್ಪಕವಾಗಿ ನಡೆಯಬೇಕು ಎಂದು ಸಲಹೆ ಸೂಚನೆ ನೀಡಿದ್ದಾಗಿ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ಉತ್ತರಿಸಿದರು.
ಬಂಗ್ಲೆಗುಡ್ಡೆ, ಉಪ್ಪುಗುಡ್ಡೆ ಸಹಿತ ಹಲವೆಡೆ ಪುರಸಭೆ ಜಾಗ ಅನ್ಯರ ಪಾಲಾಗುತ್ತಿದೆ, ರಾಜಾರೋಷವಾಗಿ ಕಟ್ಟಡ ನಿರ್ಮಾಣವಾಗುತ್ತಿದೆ ಎಂದು ಹಿರಿಯ ಸದಸ್ಯ ಎ.ಗೋವಿಂದ ಪ್ರಭು ಹೇಳಿದರು. ಅಲ್ಲಿರುವ ವಿಎ ಕಚೇರಿ ಇರುವ ಶಿಥಿಲಾವಸ್ಥೆಯಲ್ಲಿರುವ ಕಟ್ಟಡ ಕುಸಿದು ಬೀಳುವ ಹಂತದಲ್ಲಿದೆ ಎಂದು ಸದಸ್ಯ ಸಿದ್ಧೀಕ್ ಗುಡ್ಡೆಯಂಗಡಿ ತಿಳಿಸಿದರು.
ಪುರಸಭೆಯ ಕೆಲಸವೊಂದರ ಗುತ್ತಿಗೆ ಪಡೆದುಕೊಳ್ಳುವ ಸಂದರ್ಭ ಈ ಹಿಂದೆ ಕೈಗೊಂಡ ನಿರ್ಣಯ ಅನುಸರಿಸುವಂತೆ ಮಹಮ್ಮದ್ ಶರೀಫ್ ಹೇಳಿದರು. ಈ ಸಂದರ್ಭ ಗುತ್ತಿಗೆದಾರರಿಗೆ ನೀಡಿದ ಕೊಟೇಶನ್ ತಡೆಹಿಡಿಯಲು ಅಧ್ಯಕ್ಷ ಬಿ.ವಾಸು ಪೂಜಾರಿ ಹೇಳಿದರು.
ಬಿಸಿರೋಡಿನ ಕೃಷಿ ಇಲಾಖೆಯ ಸಮೀಪದಲ್ಲಿ ಕಟ್ಟಡದ ಕಾಮಗಾರಿ ನಡೆಯುತ್ತಿದ್ದು, ಈ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅನುಮತಿ ನೀಡಿದ್ದು ಯಾರು? ಪುರಸಭೆಯಿಂದ ಲೈಸೆನ್ಸ್ ನೀಡಲಾಗಿದೆಯಾ? ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಬಹುದಾ? ಎಂದು ಪುರಸಭೆಯ ಅಧಿಕಾರಿಗಳನ್ನು ಹಿರಿಯ ಸದಸ್ಯ ಎ.ಗೋವಿಂದ ಪ್ರಭು ಪ್ರಶ್ನೆ ಮಾಡಿದರು.
ಸಾಮಾನ್ಯ ಸಭೆಯಲ್ಲಿ ಬೋರ್ಡ್ ತೆಗೆದುಕೊಂಡ ನಿರ್ಣಯಗಳಿಗೆ ಚರ್ಚೆಗಳಿಗೆ ಬೆಲೆಯಿಲ್ಲ ಎಂದ ಮೇಲೆ ನಾವು ಯಾಕೆ ಮೀಟಿಂಗ್ ನಲ್ಲಿ ಭಾಗವಹಿಸಬೇಕು. ಹೊರಗಿನಿಂದ ಹೊರಗೆ ಸರಿಯಾಗುವುದಿದ್ದರೆ ಮೀಟಿಂಗ್ ನಲ್ಲಿ ಕುಳಿತು ಗಂಟೆಗಟ್ಟಲೆ ಚರ್ಚೆ ಯಾಕೆ ಮಾಡಬೇಕು ಎಂದು ಉಪಾಧ್ಯಕ್ಷ ಮೋನಿಸ್ ಆಲಿ ಪ್ರಶ್ನಿಸಿದರು.ವಾರಗಳ ಹಿಂದೆ ನಡೆದ ನೀರಿನ ಸಮಸ್ಯೆ ಕುರಿತ ವಿಶೇಷ ಸಭೆಯ ನಿರ್ಣಯವನ್ನು ಯಾಕೆ ಬರೆಯಲಿಲ್ಲ ಎಂದು ಸದಸ್ಯ ಹರಿಪ್ರಸಾದ್ ಕೇಳಿದರು.
ಸಾಮಾನ್ಯ ಸಭೆಯ ಅಜೆಂಡಾದಲ್ಲಿ ಈ ವಿಚಾರ ಪ್ರಸ್ತಾಪವಾಗುವ ವೇಳೆ ನಿರ್ಣಯ ಇಲ್ಲದಿದ್ದರೆ ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು. ನಿರ್ಣಯದಲ್ಲಿ ಸ್ವಲ್ಪ ಬದಲಾವಣೆ ಮಾಡಲು ಅಧ್ಯಕ್ಷರು ಸೂಚಿಸಿದ ಹಿನ್ನೆಲೆಯಲ್ಲಿ ನಿರ್ಣಯ ಬರೆಯುವುದಕ್ಕೆ ತಡವಾಗಿದೆ ಎಂದು ಸಿಬ್ಬಂದಿ ರಝಾಕ್ ಸಭೆಯ ಗಮನಕ್ಕೆ ತಂದರು.
ಕಳೆದ ಅವಧಿಯಲ್ಲಿ ಅಧ್ಯಕ್ಷನಾಗಿ ನನಗೆ ನಿರೀಕ್ಷಿತ ಮಟ್ಟಕ್ಕೆ ಆಡಳಿತ ಮಾಡಲು ಸಾಧ್ಯವಾಗಿಲ್ಲ, ಆದರೆ ನೀವು ಅದೇ ರೀತಿ ಆಗಬಾರದು ಬದಲಾಗಿ ಅಧ್ಯಕ್ಷನ ದಿಟ್ಟತನ ತೋರಿಸಬೇಕು. ನಿಮಗೆ ಯಾವ ಅಧಿಪುರಸಭೆಯ ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ಕೊರತೆ ಕಂಡುಬಂದಿದ್ದು, ಪುರಸಭೆಯಿಂದ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರು.
96 ಕೋಟಿ ರೂ ವೆಚ್ಚದ ಅಮೃತಯೋನೆಯ ಕಾಮಗಾರಿ ವಿಚಾರಕ್ಕೆ ಸಂಬಂಧಿಸಿದಂತೆ ಈವರೆಗೆ ಇಂಜಿನಿಯರ್ ಅವರನ್ನು ಕರೆಸಿದ್ದು ಬಿಟ್ಟರೆ ಒಮ್ಮೆಯಾದರೂ ಗುತ್ತಿಗೆದಾರನ್ನು ಕರೆಸಿ ಕೇಳಿದ್ದು ಉಂಟಾ? ಎಂದು ಸದಸ್ಯ ಜನಾರ್ದನ ಚೆಂಡ್ತಿಮಾರ್ ಕೇಳಿದರು.
ಪಾಣೆಮಂಗಳೂರು ಮತ್ತು ಬಿಸಿರೋಡಿನ ಅಂಗಡಿಗಳ ಮುಂಭಾಗದಲ್ಲಿ ಬೀದಿ ವ್ಯಾಪಾರಿಗಳ ಹಾವಳಿಯಿಂದ ಪುರಸಭೆಗೆ ಬಾಡಿಗೆ ಹಣ ನೀಡಿ ವ್ಯಾಪಾರ ಮಾಡುವ ಅಂಗಡಿ ಮಾಲಕರುಗಳು ವ್ಯಾಪಾರ ಇಲ್ಲದೆ ಪರದಾಡುವ ಸ್ಥಿತಿ ಇದ್ದು, ಅವರು ನೀಡಿದ ದೂರಿಗೆ ಪುರಸಭೆಯ ಅಧಿಕಾರಿಗಳು ಸ್ಪಂದನೆ ನೀಡುತ್ತಿಲ್ಲ ಎಂದು ಸದಸ್ಯ ಸಿದ್ದೀಕ್ ಬೊಗೊಡಿ ಬೇಸರ ವ್ಯಕ್ತಪಡಿಸಿದರು.ಇದಕ್ಕೆ ಧ್ವನಿ ಗೂಡಿಸಿದ ಗೋವಿಂದ ಪ್ರಭು, ಹರಿಪ್ರಸಾದ್, ಮಹಮ್ಮದ್ ಶರೀಫ್ ಬಿಸಿರೋಡಿನ ರಾಷ್ಟ್ರೀಯ ಹೆದ್ದಾರಿ ಬದಿವರೆಗೆ ಬೀದಿ ಬದಿ ವ್ಯಾಪಾರ ಮುಂದುವರಿದಿದ್ದು, ಅಪಘಾತದ ಭಯ ಉಂಟಾಗಿದೆ. ಬೀದಿ ಬದಿ ವ್ಯಾಪಾರಿಗಳನ್ನು ಕೂಡಲೇ ಎತ್ತಂಗಡಿ ಮಾಡಿ ಎಲ್ಲಾ ಸದಸ್ಯರು ಸ್ಥಳದಲ್ಲಿದ್ದು ಕಾರ್ಯಚರಣೆ ಮಾಡೋಣ ಎಂದು ಹೇಳಿದರು. ವಾರದ ಸಂತೆಯ ದಿನ ಅವರಿಂದ ಪುರಸಭೆಗೆ ಕಲೆಕ್ಷನ್ ಮಾಡಲಾಗುತ್ತದೆ ಎಂಬ ಮಾಹಿತಿ ಇದೆ ನಿಜನಾ? ಎಂದು ಅಧಿಕಾರಿಗಳಲ್ಲಿ ಪ್ರಶ್ನಿಸಿದರು.
ರಸ್ತೆ ,ಚರಂಡಿ ನಿರ್ಮಾಣದ ಹೆಸರಿನಲ್ಲಿ ಪುರಸಭೆಯಿಂದ ಹಣ ಪಾವತಿಯಾಗಿರುವ ದಾಖಲೆಗಳು ಪ್ರಶ್ನಾತೀತವಾಗಿದ್ದು, ಗೊಂದಲ ಮೂಡಿದೆ. ಪಾಣೆಮಂಗಳೂರು ರಸ್ತೆ ಚರಂಡಿ ದುರಸ್ತಿಗೆ ಮಾಡಿದ ಸಂಬಳ 62 ಸಾವಿರ ರೂ ಹಣವನ್ನು ಪುರಸಭೆಯಿಂದ ನೀಡಲಾಗಿದೆ, ಎಲ್ಲಿ ಕಾಮಗಾರಿ ನಡೆದಿದೆ ಎಂದು ವಾರ್ಡಿನ ಸದಸ್ಯೆ ಗಾಯತ್ರಿ ಅವರು ಅಧಿಕಾರಿಗಳಲ್ಲಿ ಕೇಳಿದಾಗ ಪಂಪ್ ಅಳವಡಿಸಲು ಈ ರೂಪದಲ್ಲಿ ಹಣವನ್ನು ಪಡೆದುಕೊಂಡು ನೀಡಲಾಗಿದೆ ಎಂದು ಇಂಜಿನಿಯರ್ ಡೊಮಿನಿಕ್ ಡಿಮೆಲ್ಲೋ ಉತ್ತರಿಸಿದರು.
ಪಾಣೆಮಂಗಳೂರು ಮಟನ್ ಸ್ಟಾಲ್ ವಿಚಾರದಲ್ಲಿ ಆಡಳಿತ ಪಕ್ಷದ ಸದಸ್ಯರು ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ಪರವಿರೋಧದ ಚರ್ಚೆ ನಡೆದು ತಾರಕ್ಕಕೇರಿತು.ಬೀದಿನಾಯಿ ಹಾವಳಿ ಮಿತಿಮೀರಿದೆ ಎಂದು ಹೇಳಿದ ಮಹಮ್ಮದ್ ನಂದರಬೆಟ್ಟು, ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಕೊಡಂಗೆ ಶಾಲೆಯ ಮಕ್ಕಳಿಗೆ ಕಚ್ಚಿದ್ದು, ಅಪಾಯಕಾರಿಯಾಗಿದೆ ಎಂದರು. ಅಜ್ಜಿಬೆಟ್ಟು ವಿನಲ್ಲೂ ಈ ಸಮಸ್ಯೆ ಇದೆ ಎಂದು ವಿದ್ಯಾವತಿ ಪ್ರಮೋದ್ ಗಮನ ಸೆಳೆದರು. ಪಾಣೆಮಂಗಳೂರು ಶಾಲಾ ಬಳಿಯೂ ಈ ಸಮಸ್ಯೆ ಇರುವುದಾಗಿ ಸಿದ್ದೀಕ್ ದನಿಗೂಡಿಸಿದರು. ಸಂತಾನಶಕ್ತಿಹರಣ ಚಿಕಿತ್ಸಾ ಕ್ರಮ ಕೈಗೊಳ್ಳಲು ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದಾಗಿ ಆರೋಗ್ಯಾಧಿಕಾರಿ ರತ್ನಪ್ರಸಾದ್ ತಿಳಿಸಿದರು.
ಸೆಕ್ಕಿಂಗ್ ಯಂತ್ರ ಹಾಗೂ ಜೆಸಿಬಿ ವಾಹನ ಯಾಕೆ ಪೂಜೆಗಿಟ್ಟದ್ದಾ? ಅಥವಾ ಕೆಲಸಕ್ಕಾಗಿಯಾ? ಎಂದು ಗೋವಿಂದ ಪ್ರಶ್ನಿಸಿದರು.ಇದಕ್ಕೆ ಧ್ವನಿ ಗೂಡಿಸಿದ ಸದಸ್ಯರು ಲಕ್ಷಾಂತರ ರೂ ಮೌಲ್ಯದ ಯಂತ್ರೋಪಕರಣಗಳು ತುಕ್ಕುಹಿಡಿಯುತ್ತಿದೆ . ಸಭೆಯಲ್ಲಿ ವಿಷಯಾಂತರ ಮಾಡುತ್ತೀರಿ.ಮಾಧ್ಯಮಗಳಲ್ಲಿ ನಿರಂತರವಾಗಿ ವರದಿ ಪ್ರಕಟವಾಗುತ್ತಿದ್ದರೂ ಪುರಸಭೆ ಮೌನವಾಗಿರುವುದರ ಹಿಂದಿನ ರಹಸ್ಯ ವೇನು ? ಎಂದು ಪ್ರಶ್ನಿಸಿದರು.
ಸಭೆಯಲ್ಲಿ ಉಪಾಧ್ಯಕ್ಷ ಮೊನಿಸ್ ಆಲಿ, ಪುರಸಭೆ ಮುಖ್ಯಾಧಿಕಾರಿ ಲೀನಾಬ್ರಿಟ್ಟೊ ಉಪಸ್ಥಿತರಿದ್ದರು.