ಉಳ್ಳಾಲ,ಡಿ.19(DaijiworldNews/AK): ರಾಷ್ಟ್ರೀಯ ಹೆದ್ದಾರಿ-66ರ ಹಳೇಯ ನೇತ್ರಾವತಿ ಸೇತುವೆಯಲ್ಲಿ ಹೊಂಡ ಮುಚ್ಚುವ ಕಾಮಗಾರಿಗೆ ಗುತ್ತಿಗೆ ಸಂಸ್ಥೆ ಮುಂದಾದ ಹಿನ್ನೆಲೆಯಲ್ಲಿ ಡಿ.18 ದಿನವಿಡೀ ಹಾಗೂ ಡಿ.19ರ ಮಧ್ಯಾಹ್ನದವರೆಗೆ ಮಂಗಳೂರು ಪ್ರಯಾಣಿಸುವ ವಾಹನ ಸವಾರರು ಗಂಟೆಗಟ್ಟಲೆ ರಸ್ತೆಗಳಲ್ಲೇ ಉಳಿದು ತೊಂದರೆಗೊಳ ಪಡಬೇಕಾಯಿತು.

ಆಂಬ್ಯುಲೆನ್ಸ್ ವಾಹನ, ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ಕಾರ್ಮಿಕರು , ವಿಮಾನ ನಿಲ್ದಾಣ, ರೈಲ್ವೇ ನಿಲ್ದಾಣ ತೆರಳುವ ಮಂದಿ ತೊಂದರೆಗೊಳಗಾದರು.
ಕೆಲ ದಿನಗಳ ಹಿಂದೆ ಹಳೇಯ ನೇತ್ರಾವತಿ ಸೇತುವೆಯಲ್ಲಿ ರಾಡ್ ಕಿತ್ತು ಬಂದು, ಅದರ ಮೇಲೆ ಚಲಿಸಿದ ಕಾರೊಂದರ ಎರಡು ಟಯರ್ ಗಳು ಒಡೆದುಹೋಗಿತ್ತು. ಅದೃಷ್ಟವಶಾತ್ ಸಂಭಾವ್ಯ ಅನಾಹುತ ತಪ್ಪಿತ್ತು. ಈ ಕುರಿತು ವೀಡಿಯೋ ದಾಖಲೆ ನಡೆಸಿದ ಕಾರು ಸವಾರ ಇತರೆ ವಾಹನ ಸವಾರರಲ್ಲಿ ಜಾಗೃತಿ ವಹಿಸುವಂತೆ ಮನವಿ ಮಾಡಿಕೊಂಡು, ಹೆದ್ದಾರಿ ಅಧಿಕಾರಿಗಳ, ಗುತ್ತಿಗೆ ಸಂಸ್ಥೆಯ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದರು.
ಇದರಿಂದಾಗಿ ಅಂದೇ ಹೊಂಡಗಳನ್ನು ಮುಚ್ಚುವ ಕೆಲಸಕ್ಕೆ ಸಂಸ್ಥೆ ಮುಂದಾದರೂ, ಸೇತುವೆಯಿಡೀ ಹೊಂಡಗಳೇ ತುಂಬಿದ ಹಿನ್ನೆಲೆಯಲ್ಲಿ ಡಿ.18 ರಿಂದ ಶಾಶ್ವತ ಕಾಮಗಾರಿಗೆ ಸಂಸ್ಥೆ ಮುಂದಾಗಿದೆ. ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆದುಕೊಂಡು ಸೇತುವೆಯ 25 ಫೀಟ್ ನಷ್ಟು ರಸ್ತೆಯ ಮರುಕಾಂಕ್ರೀಟಿಕರಣ ಕಾಮಗಾರಿ ಆರಂಭಿಸಿದೆ. ಇದರಿಂದಾಗಿ ಕೇರಳದಿಂದ ಹಾಗೂ ಉಳ್ಳಾಲ ತಾಲೂಕು ವ್ಯಾಪ್ತಿಯಿಂದ ಮಂಗಳೂರು ತೆರಳುವ ವಾಹನ ಸವಾರರು ಸೇತುವೆಯಲ್ಲಿನ ಏಕವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿದ ಹಿನ್ನೆಲೆಯಲ್ಲಿ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.
ಇದರಿಂದಾಗಿ ರೈಲ್ವೇ ಪ್ರಯಾಣಿಕರು, ವಿಮಾನದಲ್ಲಿ ಪ್ರಯಾಣಿಸುವವರಿಗೂ , ವಿದ್ಯಾರ್ಥಿಗಳಿಗೆ, ಕಾರ್ಮಿಕರಿಗೆ ಸೂಕ್ತ ಸಮಯದಲ್ಲಿ ಸಂಬAಧಪಟ್ಟ ಸ್ಥಳಗಳಿಗೆ ತಲುಪಲು ಸಾಧ್ಯವಾಗದೆ ವಾಪಸ್ಸು ಬರುವಂತೆ ಆಗಿದೆ. ಸಂಚಾರ ವ್ಯತ್ಯಯ ಎರಡನೇ ದಿನ ಡಿ.19ಕ್ಕೂ ಮುಂದುವರಿದು ಬೆಳಿಗ್ಗೆ 5 ಕಿ.ಮೀ ಉದ್ದಕ್ಕೂ ವಾಹನಗಳು ಸರತಿ ಸಾಲುಗಳಲ್ಲಿ ನಿಂತಿತ್ತು. ಆಂಬ್ಯುಲೆನ್ಸ್ ವಾಹನಗಳು ರಸ್ತೆಮಧ್ಯೆ ಸಿಲುಕಿದರೆ, ಕೆಲ ವಾಹನಗಳು ವಿರುದ್ಧ ಧಿಕ್ಕಿನಲ್ಲಿ ಏಕಮುಖ ಸಂಚಾರ ನಡೆಸಿದೆ.
ಏಕಮುಖ ಸಂಚಾರದಿಂದಾಗಿ ಅಪಘಾತಗಳು ಹೆಚ್ಚಾದ ಹಿನ್ನೆಲೆಯಲ್ಲಿ ಆಂಬ್ಯುಲೆನ್ಸ್ ಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಆದರೆ ಇಂದು ಮುಂಜಾನೆ 5 ಕಿ.ಮೀ ಉದ್ದಕ್ಕೂ ವಾಹನಗಳು ಸರತಿ ಸಾಲುಗಳಲ್ಲಿ ನಿಂತ ಪರಿಣಾಮವಾಗಿ , ಜನರಿಂದ ಆಕ್ರೋಶಗಳು, ದೂರುಗಳು ಕೇಳಿಬಂದ ಬೆನ್ನಲ್ಲೇ ಸೇತುವೆ ಸಮೀಪವೇ ತೆರವು ನಡೆಸಿ ವಾಹನ ದಟ್ಟಣೆ ಹೆಚ್ಚಿರುವ ಸಂದರ್ಭದಲ್ಲಿ ವಾಹನಗಳನ್ನು ಹೊಸಸೇತುವೆಯಲ್ಲಿ ಏಕಮುಖ ಸಂಚಾರವಾಗಿ ತೆರಳಲು ಅವಕಾಶ ಕಲ್ಪಿಸಲಾಗಿದೆ.
7 ದಿನಗಳ ಕಾಮಗಾರಿ
25 ಫೀಟ್ ನಷ್ಟು ಹೊಂಡಗಳಿಂದ ಕೂಡಿರುವ ಸೇತುವೆಯ ಮರುಕಾಂಕ್ರೀಟಿಕರಣ ಕಾಮಗಾರಿಗೆ ಗುತ್ತಿಗೆ ಸಂಸ್ಥೆ ಏಳು ದಿನಗಳ ಕಾಲಾವಕಾಶ ಕೇಳಿದೆ. ಎರಡು ದಿನಗಳು ಮುಗಿದಿದ್ದು, ಇನ್ನು ಐದು ದಿನಗಳವರೆಗೆ ಅಥವಾ ಅದಕ್ಕಿಂತ ಮೊದಲೇ ಕಾಮಗಾರಿ ಮುಗಿಯುವ ವಿಶ್ವಾಸವಿದೆ. ವಾಹನ ಸವಾರರು ದಟ್ಟಣೆಯಿಲ್ಲದ ಸಂದರ್ಭ ಹಳೇ ಸೇತುವೆಯಲ್ಲೇ ತೆರಳಬಹುದು. ವಾಹನ ದಟ್ಟಣೆ ಹೆಚ್ಚಿರುವ ಸಂದರ್ಭ ಹೊಸ ಸೇತುವೆಯಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.