ಮಂಗಳೂರು, ಡಿ.20(DaijiworldNews/AA): ಸಾರ್ವಜನಿಕ ನಗರ ವ್ಯಾಪ್ತಿಯಲ್ಲಿ ಹಲವು ಸಮಯದಿಂದ ರಸ್ತೆಯಲ್ಲಿ ಹಲವು ಸಮಯಗಳಿಂದ ಪಾರ್ಕಿಂಗ್ ಮಾಡಲಾಗಿರುವ ಗುಜರಿ ವಾಹನಗಳನ್ನು ತೆರವುಗೊಳಿಸುವಂತೆ ಪಾಲಿಕೆ ಸೂಚನೆ ನೀಡಿದ್ದು, 15 ದಿನಗಳ ಗಡುವು ನೀಡಿದೆ.

ಮಣ್ಣಗುಡ್ಡೆಯ ಬರ್ಕೆಲೇನ್ನ ಸಾರ್ವಜನಿಕ ರಸ್ತೆಯಲ್ಲಿ ಕಳೆದ ಒಂದು ವರ್ಷದಿಂದ ಗುಜುರಿ ಕಾರುಗಳನ್ನು ನಿಲ್ಲಿಸಲಾಗಿದ್ದು, ಇದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ. ಜನಸಾಮಾನ್ಯರ ಸಮಸ್ಯೆ ಕುರಿತು ದಾಯ್ಜಿವರ್ಲ್ಡ್ ವಾಹಿನಿ ವರದಿ ಮಾಡಿತ್ತು. ಇದರ ಬೆನ್ನಲ್ಲೇ ಪಾಲಿಕೆ ಆಯುಕ್ತ ಆನಂದ್ ಸಿ.ಎಲ್. ಅವರು ವಾಹನಗಳನ್ನು ತೆರವುಗೊಳಿಸಲು ಸೂಚನೆ ನೀಡಿದ್ದಾರೆ.
ವಾಹನ ಮಾಲಕರಿಗೆ 15 ದಿನಗಳ ಗಡುವು ನೀಡಿದ್ದು, ಇವುಗಳ ಪತ್ತೆಗೆ ಅಧಿಕಾರಿಗಳ ತಂಡ ರಚಿಸಿದ್ದಾರೆ. 15 ದಿನಗಳ ಬಳಿಕವೂ ತೆರವುಗೊಳಿಸದೇ ಇದ್ದಲ್ಲಿ ಅಂತಹ ವಾಹನಗಳನ್ನು ವಾರಸುರಹಿತ ವಾಹನಗಳೆಂದು ಪರಿಗಣಿಸಿ ಪಾಲಿಕೆಯ ಮೂಲಕ ಪಚ್ಚನಾಡಿಯಲ್ಲಿರುವ ಪಾಲಿಕೆಯ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸ್ಥಳಾಂತರಿಸಲಾಗುವುದು ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.