ಮೂಲ್ಕಿ,ಡಿ.21(DaijiworldNews/TA): ಬಳ್ಕುಂಜೆ, ಕರ್ನಿರೆ ಮೂಲಕ ಉಡುಪಿ ಜಿಲ್ಲೆಯ ಪಲಿಮಾರನ್ನು ಸಂಪರ್ಕಿಸುವ ಶಾಂಭವಿ ನದಿ ಸೇತುವೆಯಲ್ಲಿ ಘನ ವಾಹನಗಳ ಸಂಚಾರ ನಿರ್ಬಂಧಿಸಿರುವುದರಿಂದ ಈ ಭಾಗದ ಕಾರ್ಮಿಕರು, ಸಾರ್ವಜನಿಕರು ಮತ್ತು ವಿದ್ಯಾರ್ಥಿನಿಯರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ.

ಸೇತುವೆ ಶಿಥಿಲವಾಗಿದೆ ಎಂಬ ಎಂಜಿನಿಯರ್ ವರದಿಯಂತೆ ಸೇತುವೆ ಮೇಲೆ ಯಾವುದೇ ಘನ ವಾಹನ ಸಾಗದಂತೆ 7 ಅಡಿ ಎತ್ತರದ ಕಮಾನು ಹಾಕಲಾಗಿದೆ. ಕರ್ನಿರೆ ಬಳ್ಕುಂಜೆ ಭಾಗದಿಂದ ಹಲವಾರು ಮಂದಿ ಉದ್ಯೋಗ, ವಿದ್ಯಾಭ್ಯಾಸ ನಿಮಿತ್ತ ಪಲಿಮಾರು ಭಾಗಕ್ಕೆ ತೆರಳುತ್ತಾರೆ. ಅವರೆಲ್ಲರೂ ಬಳಸುವ ಮಾರ್ಗ ಇದಾಗಿದೆ. ಪಲಿಮಾರು ಭಾಗದಿಂದಲೂ ಸಾಕಷ್ಟು ಮಂದಿ ಬಳ್ಕುಂಜೆ ಕಡೆಗೆ ಬರುತ್ತಾರೆ. ಅವರೆಲ್ಲರಿಗೆ ಈಗ ಬಸ್ ಸಂಚಾರ ಇಲ್ಲದೆ ಸಮಸ್ಯೆಯಾಗಿದೆ.
ಬಸ್ಸನ್ನೇ ನಂಬಿ ಶಾಲೆ, ಕಾಲೇಜು, ವಿದ್ಯಾಭ್ಯಾಸಕ್ಕೆ ಹೋಗುತ್ತಿದ್ದವರು ಈಗ ರಿಕ್ಷಾ ಮತ್ತಿತರ ವಾಹನಗಳನ್ನು ಅವಲಂಬಿಸಲಾಗಿದೆ. ದಿನನಿತ್ಯವೂ ರಿಕ್ಷಾಕ್ಕೆ ಹೆಚ್ಚಿನ ವೆಚ್ಚ ಭರಿಸಬೇಕಾದ ಅನಿವಾರ್ಯತೆ ಉಂಟಾಗಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯನ್ನು ಸಂಪರ್ಕಿಸುವ ಈ ಸೇತುವೆಯನ್ನು ತುರ್ತಾಗಿ ದುರಸ್ತಿ ಮಾಡಿ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.