ಮಂಗಳೂರು, ಜೂ 8 (Daijiworld News/MSP): ಕಡಲನಗರಿಯನ್ನು ಬೆಚ್ಚಿ ಬೀಳಿಸಿದ್ದ , ಬ್ಯಾಂಕಿಂಗ್ ಕೋಚಿಂಗ್ ಪಡೆಯಲು ಚಿಕ್ಕಮಗಳೂರಿನಿಂದ ಬಂದ ವಿದ್ಯಾರ್ಥಿನಿ ಅಂಜನಾ ವಸಿಷ್ಠ (22)ಳನ್ನು ಹತ್ಯೆಗೈದು ಪರಾರಿಯಾಗಿದ್ದ, ಆರೋಪಿಯ ಜಾಡು ಹಿಡಿದು ಹೊರಟಿದ್ದ ಪೊಲೀಸರು, ಅಂಜನಾ ಸ್ನೇಹಿತ ವಿಜಯಪುರ ಮೂಲದ ಸಂದೀಪ್ ರಾಥೋಡ್ ನನ್ನು ಸಿಂಧಗಿಯಲ್ಲಿ ಜೂನ್ 8 ರ ಶನಿವಾರ ಬೆಳಗ್ಗೆ ಬಂಧಿಸಿದ್ದಾರೆ. ಆರೋಪಿ ಸಂದೀಪ್ ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಬೆನಕೋಟಗಿ ತಾಂಡದ ಬಾಲು ರಾಥೋಡ್ ಎಂಬವರ ಪುತ್ರನಾಗಿದ್ದಾನೆ.
ಘಟನೆಯ ವಿವರ:
ಬ್ಯಾಂಕಿಂಗ್ ಕೋಚಿಂಗ್'ಗೆಂದು ಬಂದಿದ್ದ ಅಂಜನಾ ವಸಿಷ್ಠ (22) ಅತ್ತಾವರದ ಬಾಡಿಗೆ ಕೊಠಡಿಯೊಂದರಲ್ಲಿ ಕತ್ತುಹಿಸುಕಿ ಕೊಲೆ ಮಾಡಿದ ಸ್ಥಿತಿಯಲ್ಲಿ ಜೂನ್ 7ರ ಶುಕ್ರವಾರ ಸಂಜೆ ಪತ್ತೆಯಾಗಿದ್ದಳು. ಉಜಿರೆಯಲ್ಲಿ ಎಂಎಸ್ಸಿ ಪೂರ್ಣಗೊಳಿಸಿದ ಬಳಿಕ ಈಕೆಗೆ ಬ್ಯಾಂಕಿಂಗ್ ನೇಮಕಾತಿ ಪರೀಕ್ಷೆಗಾಗಿ ತರಬೇತಿ ಪಡೆಯಲು ಗುರುವಾರ ಬೆಳಗ್ಗೆ ಚಿಕ್ಕಮಗಳೂರಿನಿಂದ ಮಂಗಳೂರಿನಿಂದ ಬಂದಿದ್ದಳು. ಅತ್ತಾವರ 6ನೇ ಕ್ರಾಸ್ನಲ್ಲಿರುವ ತನ್ನ ಸ್ನೇಹಿತ ವಿಜಯಪುರ ಮೂಲದ ಸಂದೀಪ್ ರಾಥೋಡ್ ಎಂಬವನ ಬಾಡಿಗೆ ಕೊಠಡಿಗೆ ಹೋಗಿದ್ದು, ಅಲ್ಲಿ ಮಂಚದ ಸರಳಿನೆಡೆಯಲ್ಲಿ ಈಕೆಯ ಕುತ್ತಿಗೆ ಬಿಗಿದು ವಯರ್ ಸುತ್ತಿ ಕೊಲೆ ಮಾಡಲಾಗಿತ್ತು.
ಸಂಜೆ ವೇಳೆ ಕೊಲೆ ಪ್ರಕರಣ ಬಯಲಿಗೆ ಬಂದಿತ್ತು. ಆರೋಪಿ ಸಂದೀಪ್ ರಾಠೋಡ್ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿ ಪರೀಕ್ಷೆಗೆ ತರಬೇತಿ ಪಡೆಯಲು ಮಂಗಳೂರಿಗೆ ಆಗಮಿಸಿದ್ದ. ಜೂನ್ 2ರಿಂದ ಅತ್ತಾವರ 6ನೇ ಕ್ರಾಸ್ನ ಲೂಯಿಸ್ ಪಯಾಸ್ ಎಂಬುವವರ ಬಾಡಿಗೆ ಮನೆ ಪಡೆದುಕೊಂಡು, ಅಲ್ಲಿಯೇ ವಾಸವಾಗಿದ್ದ. ಜೂ.2ರಂದು ಬಾಡಿಗೆ ಮನೆ ಪಡೆಯಲು ಬಂದಾಗ ಅಂಜನಾ ಕೂಡಾ ಬಂದು ಹೋಗಿದ್ದಳು. ಶುಕ್ರವಾರ ಮತ್ತೆ ಬೆಳಗ್ಗೆ ಸಂದೀಪ್ ರಾಠೋಡ್ನ ಬಾಡಿಗೆ ಮನೆಗೆ ಬಂದಿದ್ದು, ಈ ವೇಳೆ ಮನೆ ಮಾಲೀಕರಲ್ಲಿ ನಾವಿಬ್ಬರು ಮದುವೆಯಾಗಿರುವುದಾಗಿ ಹೇಳಿದ್ದಲ್ಲದೆ, ಊರಿನಿಂದ ಚಪಾತಿ ತಂದಿದ್ದೇನೆ. ಕೊಡಲು ಬಂದಿರುವುದಾಗಿ ನಂಬಿಸಿ ಮನೆಯ ಮೇಲಿರುವ ಬಾಡಿಗೆ ಕೊಠಡಿಗೆ ಹೋಗಿದ್ದಳು. ಬಳಿಕ ಕೊಲೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು.