ಕುಂದಾಪುರ,ಡಿ.22(DaijiworldNews/TA): ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ರಾತ್ರೋ ರಾತ್ರಿ ಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಇಪ್ಪತ್ತು ಲಕ್ಷಕ್ಕೂ ಮಿಕ್ಕಿದ ಚಿನ್ನಾಭರಣ ವಜ್ರ, ರೇಷ್ಮೆ ಸೀರೆಗಳನ್ನು ಕಳವುಗೈದ ಘಟನೆ ಡಿಸೆಂಬರ್ 20ರ ಶುಕ್ರವಾರ ರಾತ್ರಿ ಕುಂದಾಪುರ ನಗರದ ಹೊರವಲಯದಲ್ಲಿ ನಡೆದಿದೆ.
ಕುಂದಾಪುರ ಹೋಬಳಿಯ ವಿಠಲವಾಡಿಗೆ ಹೋಗುವ ರಸ್ತೆಯಲ್ಲಿರುವ ಶಿವರಾಮ ಶೆಟ್ಟಿ ಎಂಬುವರ ಮನೆ ದರೋಡೆಗೊಳಗಾಗಿದ್ದು, ಮನೆಯಲ್ಲಿ ಶಿವರಾಮ ಶೆಟ್ಟಿ ಹಾಗೂ ಅವರ ಪತ್ನಿ ಮಮತ ಇಬ್ಬರೇ ವಾಸವಿರುತ್ತಿದ್ದರು. ಅವರ ಮಕ್ಕಳು ಬೆಂಗಳೂರಿನಲ್ಲಿ ಉದ್ಯೋಗ ಮಾಡಿಕೊಂಡಿದ್ದು, ಇಬ್ಬರೂ ಮನೆಗೆ ಬೀಗ ಹಾಕಿ ಬೆಂಗಳೂರಿಗೆ ಹೋಗಿದ್ದರೆನ್ನಲಾಗಿದೆ.
ಶನಿವಾರ ಬೆಳಿಗ್ಗೆ ಕೆಲಸದಾಕೆ ಹೂವಿನ ಗಿಡಕ್ಕೆ ನೀರು ಬಿಡಲು ಬಂದ ಸಂದರ್ಭ ಮನೆಯ ಬಾಗಿಲು ಅರ್ಧ ತೆರೆದಿರುವುದು ಗಮನಕ್ಕೆ ಬಂದಿದೆ. ಅನುಮಾನಗೊಂಡು ಮನೆಯ ಯಜಮಾನರಿಗೆ ಫೋನ್ ಮಾಡಿದ್ದಾಳೆ. ಬಳಿಕ ಮನೆ ಮಾಲಕರ ಸಂಬಂಧಿ ಸ್ಥಳಕ್ಕೆ ಬಂದು ಪರಿಶೀಲಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಶ್ವಾನ ದಳ, ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದ ವೇಳೆ ಸುಮಾರು 20 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ, ವಜ್ರಾಭರಣ ಹಾಗೂ ಬೆಲೆಬಾಳುವ ರೇಷ್ಮೆ ಸೀರೆಗಳನ್ನು ಕದ್ದೊಯ್ದಿದ್ದಾರೆ.
ಬೆಳ್ಳಿಯ ವಸ್ತುಗಳನ್ನು ಕಳ್ಳರು ಮುಟ್ಟಿಲ್ಲ. ಕಳೆದ ಹಲವು ತಿಂಗಳಿನಿಂದ ಕುಂದಾಪುರ ನಗರದಲ್ಲಿ ಕಳ್ಳರ ಕಾಟ ಹೆಚ್ಚಾಗಿದ್ದು, ರಾತ್ರಿ ಜನ ಆತಂಕದಲ್ಲಿ ದಿನ ಕಳೆಯುವಂತಾಗಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕಾಗಿದೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.