ಸುಳ್ಯ, ಡಿ.24(DaijiworldNews/AA): ಸುಬ್ರಹ್ಮಣ್ಯದಲ್ಲಿರುವ ಅರ್ಚಕರ ಮನೆಯಿಂದ ಹಣ ಹಾಗೂ ಚಿನ್ನ ಕಳ್ಳತನ ಆಗಿರುವ ಘಟನೆ ನಡೆದಿದೆ.
ಸುಬ್ರಹ್ಮಣ್ಯ ಮಠದಲ್ಲಿ ಅರ್ಚಕರಾಗಿರುವ ಆನಂದ ಭಟ್ ಅವರು ಡಿ. 22ರಂದು ಬೆಳಗಿನ ಜಾವ ಎಂದಿನಂತೆ ಮಠಕ್ಕೆ ತೆರಳಿದ್ದರು. ಬಳಿಕ ಕೆಲಸ ಮುಗಿಸಿಕೊಂಡು ಬೆಳಗ್ಗೆ ಮನೆಗೆ ಬಂದಾಗ ಮನೆಯ ಮುಂಬಾಗಲಿನ ಬೀಗ ಮುರಿದಿರುವುದು ಕಂಡುಬಂದಿತ್ತು.
ಮನೆಯ ಒಳಗೆ ಹೋಗಿ ನೋಡಿದಾಗ ಗಾದ್ರೇಜ್ ತೆರೆದಿದ್ದು, ಪರಿಶೀಲಿಸಿದಾಗ ಗಾದ್ರೇಜ್ ಒಳಗಡೆ ಪರ್ಸ್ನಲ್ಲಿಟ್ಟಿದ್ದ ಸುಮಾರು 25 ಸಾವಿರ ರೂ. ಹಣ ಮತ್ತು 1.15 ಲಕ್ಷ ರೂ. ಮೌಲ್ಯದ ಸುಮಾರು 23 ಗ್ರಾಂ ಚಿನ್ನಾಭರಣ ಕಳವಾಗಿರುವುದು ಬೆಳಕಿಗೆ ಬಂದಿದೆ.
ಸುಬ್ರಹ್ಮಣ್ಯ ಪೊಲೀಸರು ಹಾಗೂ ತನಿಖಾ ತಂಡದೊಂದಿಗೆ ಘಟನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.