ಮಂಗಳೂರು, ಡಿ.24(DaijiworldNews/AA): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಕಾರಿ ಶಾಲೆಗಳನ್ನು ಉಳಿಸುವ ದೃಷ್ಟಿಯಿಂದ ದ.ಕ. ಜಿಲ್ಲಾಡಳಿತ, ದೇಶದ ವಿವಿಧ ಭಾಗ ಹಾಗೂ ವಿದೇಶಗಳಲ್ಲಿರುವ ಜಿಲ್ಲೆಯವರಿಂದ ಸಹಾಯಹಸ್ತ ಬಯಸುವ 'ನಮಗಾಗಿ (ನಿಮ್ಮ ಸಹಾಯ-ನಮ್ಮ ಬೆಳಕಿಗೆ)' ಎಂಬ ಪೋರ್ಟಲ್ ಆರಂಭಿಸಿದ್ದು, ಈ ವಿಶೇಷ ಯೋಜನೆಯ ಪೋರ್ಟಲನ್ನು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಿದರು.
ನಗರದ ಜಿಲ್ಲಾ ಪಂಚಾಯತ್ನ ನೇತ್ರಾವತಿ ಸಭಾಂಗಣದಲ್ಲಿ ಸೋಮವಾರ ಈ ವಿಶೇಷ ಯೋಜನೆಯ ಪೋರ್ಟಲನ್ನು ಉದ್ಘಾಟಿಸಲಾಯಿತು. ದ.ಕ. ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತ್ನ ಈ ಯೋಜನೆಯು ಸರ್ಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ಮೂಲಸೌಕರ್ಯ ಒದಗಿಸುವ ಉದ್ದೇಶ ಹೊಂದಿದೆ. ಸರ್ಕಾರಿ ಶಾಲೆಯ ಉಳಿವಿಗಾಗಿ ಸಾರ್ವಜನಿಕರಿಂದ ಸಹಕಾರದ ಪೋರ್ಟಲ್ ಇದಾಗಿದ್ದು, ಶಾಲೆಗಳಿಗೆ ಬೆಂಚು, ಡೆಸ್ಕ್, ಟೇಬಲ್, ಕಂಪ್ಯೂಟರ್, ಕ್ಲಾಸ್ ರೂಂ, ಲ್ಯಾಬೋರೇಟರಿ ರೂಂ, ಕಂಪೌಂಡ್ ಹಾಲ್, ಶೌಚಾಲಯ, ಅಡುಗೆ ರೂಂ, ಅಡಿಟೋರಿಯಂ ಕಟ್ಟಡ ಸೇರಿದಂತೆ ಇನ್ನಿತರ ಮೂಲಸೌಕರ್ಯಕ್ಕಾಗಿ https://cf.dakshinakannada.org/ ಪೋರ್ಟಲ್ ಮೂಲಕ ದೇಣಿಗೆ ನೀಡಬಹುದಾಗಿದೆ.
ಪೋರ್ಟಲ್ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ೩೫೦ಕ್ಕೂ ಅಧಿಕ ಸರಕಾರಿ ಶಾಲೆಯ ಹೆಸರು ಹಾಗೂ ಮಾಹಿತಿಗಳನ್ನು ಹಾಕುವುದರೊಂದಿಗೆ, ಇವುಗಳಲ್ಲಿ ಯಾವ ಸರಕಾರಿ ಶಾಲೆಗೆ ಯಾವ ಮೂಲ ಸೌಕರ್ಯದ ಅವಶ್ಯಕತೆಯಿದೆ ಎಂಬುವುದರ ಬಗ್ಗೆಯೂ ತಿಳಿಸಲಾಗಿದೆ. ದಾನಿಗಳು ಸಹಾಯ ನೀಡುವ ಶಾಲೆಯ ಬಗ್ಗೆ ಪೋರ್ಟಲ್ ಮೂಲಕ ಸಂಪರ್ಕ ಮಾಡಿದಾಗ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ದೊರೆಯಲಿದೆ. ಆ ಅಧಿಕಾರಿ ಪರಿಶೀಲಿಸಿ ಸಂಬಂಧಪಟ್ಟ ಶಾಲೆಯ ಮುಖ್ಯ ಶಿಕ್ಷಕರ ಮೊಬೈಲ್ ನಂಬರ್ನ್ನು ದಾನಿಗಳಿಗೆ ನೀಡುತ್ತಾರೆ. ಅವರು ಮುಖ್ಯ ಶಿಕ್ಷಕರನ್ನು ಸಂಪರ್ಕಿಸಿ ಆ ಶಾಲೆಗೆ ಬೇಕಾದ ಸೊತ್ತುಗಳನ್ನು ಒದಗಿಸುವ ವ್ಯವಸ್ಥೆ ಮಾಡಬಹುದಾಗಿದೆ.
ಈ ಸಂದರ್ಭ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿ.ಪಂ. ಸಿಇಓ ಡಾ. ಆನಂದ್, ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್, ಪೊಲೀಸ್ ಆಧೀಕ್ಷಕ ಯತೀಶ್ ಉಪಸ್ಥಿತರಿದ್ದರು.