ಉಡುಪಿ, ಡಿ.24(DaijiworldNews/AA): 'ಯೇಸು ಜನಿಸಿದ ದನದಕೊಟ್ಟಿಗೆಯಲ್ಲಿ ಸ್ವರ್ಗದದೂತರು ಸಾರಿದ ಶಾಂತಿ, ಸೋದರತ್ವ, ಸಂಧಾನ, ಪ್ರೀತಿ ಮತ್ತು ಕ್ಷಮೆ ಇಂದು ನಮ್ಮ ಸಮಾಜಕ್ಕೆಅಗತ್ಯವಾಗಿ ಬೇಕಿದೆ' ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂದನೀಯ ಡಾಕ್ಟರ್ ಜೆರಾಲ್ಡ್ ಐಸಾಕ್ ಲೋಬೋ ತಮ್ಮ ಕ್ರಿಸ್ಮಸ್ ಸಂದೇಶದಲ್ಲಿ ತಿಳಿಸಿದ್ದಾರೆ.
ದೇವರು ಮಾನವರಾಗಿ ಈ ಧರೆಯಲ್ಲಿ ಜನಿಸಿದ ಹಬ್ಬ ಕ್ರಿಸ್ಮಸ್. ದೇವರು ನಮ್ಮೊಡನೆ ಇದ್ದಾರೆಂಬ ಭಾವನೆಯಿಂದ ಈ ಕ್ರಿಸ್ತಜಯಂತಿಯನ್ನು, ನಾವು ಸರ್ವರೊಂದಿಗೆ ಸಂತೋಷ, ಸಂಭ್ರಮದಿಂದ ಜಗತ್ತಿನಾದ್ಯಂತ ಆಚರಿಸುತ್ತೇವೆ. 'ದೇವರು ಲೋಕವನ್ನು ಎಷ್ಟಾಗಿ ಪ್ರೀತಿಸಿದರೆಂದರೆ ತಮ್ಮಏಕೈಕ ಪುತ್ರನನ್ನೇ ಧಾರೆಯೆರೆದರು; ವಿಶ್ವಾಸವಿಟ್ಟ ಯಾರೂ ನಾಶವಾಗದೆ ಎಲ್ಲರೂ ನಿತ್ಯ ಜೀವವನ್ನು ಪಡೆಯಬೇಕೆಂಬುವುದೇ ದೇವರ ಉದ್ದೇಶ'.
'ಯೇಸುಕ್ರಿಸ್ತರ 2025 ನೇ ಜನನದ ಜುಬಿಲಿ ವರ್ಷವನ್ನುಆಚರಿಸುತ್ತಿರುವ ಈ ಸಂದರ್ಭದಲ್ಲಿ, ಎಂದಿಗಿಂತಲೂ ಹೆಚ್ಚಾಗಿ ಪ್ರಪಂಚದಲ್ಲಿ ದ್ವೇಷ, ಹಿಂಸಾಚಾರ, ಯುದ್ಧ, ಪ್ರಕೃತಿ ವಿಕೋಪ, ವಿಭಜನೆಗಳನ್ನು ಅನುಭವಿಸುತ್ತಿದ್ದೇವೆ. ಯೇಸು ಜನಿಸಿದ ದನದ ಕೊಟ್ಟಿಗೆಯಲ್ಲಿ ಸ್ವರ್ಗದದೂತರು ಸಾರಿದ ಶಾಂತಿ, ಸೋದರತ್ವ, ಸಂಧಾನ, ಪ್ರೀತಿ ಮತ್ತು ಕ್ಷಮೆ ನಮ್ಮ ಸಮಾಜಕ್ಕೆಅಗತ್ಯವಾಗಿ ಬೇಕಿದೆ. ಈ ಕ್ರಿಸ್ಮಸ್ನಂದು ನಾವು ಅನುಭವಿಸಿದ ಪ್ರಭುಯೇಸುವಿನ ದೈವೀ ಗುಣಗಳನ್ನು ಎಲ್ಲರಿಗೂ ಹಂಚೋಣ. ವಿವಿಧ ಕಷ್ಟಗಳಿಗೆ ಸಿಲುಕಿಕೊಂಡು ಸಹಾಯಸ್ತ ಬೇಡುವವರ ಕಡೆಗೆ ಕೈ ಚಾಚಿ ಅವರ ಬಾಳಿಗೆ, ಭರವಸೆಯ ಕಿರಣವಾಗೋಣ. ಕ್ರಿಸ್ತರಬೆಳಕು ನಮ್ಮ ಹೃದಯಗಳಲ್ಲಿ ಇರುವ ಅಂಧಕಾರವನ್ನು ಹೋಗಲಾಡಿಸಿ, ನಮ್ಮನ್ನು ಶಾಂತಿಯ ಸಾಧನವನ್ನಾಗಿ ಮಾಡಲಿ. ಶಾಂತಿ, ಪ್ರೀತಿ ಮತ್ತು ಸೌಹಾರ್ದತೆಯ ನೆಲೆಗಳಲ್ಲಿ ಹೊಸ ಸಮಾಜವನ್ನು ನಿರ್ಮಿಸೋಣ' ಎಂದು ಧರ್ಮಾಧ್ಯಕ್ಷರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.