ಮಂಗಳೂರು, ಡಿ.24(DaijiworldNews/AA): ಕರಾವಳಿಯು ಕ್ರಿಸ್ಮಸ್ ಸಂಭ್ರಮಕ್ಕೆ ಸಜ್ಜಾಗಿದ್ದು, ಇಂದು ರಾತ್ರಿ ಕ್ರಿಸ್ಮಸ್ ಸಂಭ್ರಮಾಚರಣೆಗೆ ಚಾಲನೆ ದೊರೆಯಲಿದೆ. ಬೆತ್ಲೆಹೇಮ್ ನಗರದಲ್ಲಿ ನಡುರಾತ್ರಿಯ ವೇಳೆ ಕ್ರಿಸ್ತರ ಜನನವಾದ ಘಳಿಗೆಯನ್ನು ಸ್ಮರಿಸಿ ಕ್ರೈಸ್ತ ಬಾಂಧವರು ಇಂದು ರಾತ್ರಿ ಎಲ್ಲಾ ಚರ್ಚ್ಗಳಲ್ಲಿ ಕ್ರಿಸ್ಮಸ್ ಹಬ್ಬದ ಜಾಗರಣೆ ಆಚರಿಸಿ ಕ್ರಿಸ್ತ ಜಯಂತಿಯ ವಿಶೇಷ ಬಲಿಪೂಜೆಗಳನ್ನು ಸಲ್ಲಿಸುತ್ತಾರೆ.
ಮಂಗಳೂರು ಧರ್ಮಪ್ರಾಂತ್ಯದ ಬಂಟ್ವಾಳ, ಪುತ್ತೂರು, ಮೂಡುಬಿದಿರೆ, ಕಾಸರಗೋಡು, ವಿಟ್ಲ, ಮೊಗರ್ನಾಡು, ಮುಡಿಪು, ಮಂಗಳೂರು ನಗರದ ಎಲ್ಲಾ ಚರ್ಚ್ಗಳಲ್ಲಿ ಇಂದು ಸಂಜೆ 7 ಗಂಟೆಗೆ ಕ್ಯಾರೊಲ್ ಗಾಯನದೊಂದಿಗೆ ಸಂಭ್ರಮಾಚರಣೆ ಆರಂಭವಾಗುತ್ತದೆ. ಬಳಿಕ ಧರ್ಮಗುರುಗಳ ನೇತೃತ್ವದಲ್ಲಿ ವಿಶೇಷ ಬಲಿಪೂಜೆ, ಜಾಗತಿಕ ಶಾಂತಿಗಾಗಿ ಪ್ರಾರ್ಥನೆ ನಡೆಯುತ್ತವೆ. ಬಲಿಪೂಜೆಯ ಅಂತ್ಯದಲ್ಲಿ ಮೊಂಬತ್ತಿ ವಿತರಿಸುತ್ತಾರೆ. ಬಳಿಕ ಹಬ್ಬದ ಶುಭಾಶಯಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವುದರೊಂದಿಗೆ ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.
ಮಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶದ ಹಲವು ಚರ್ಚ್ಗಳಲ್ಲಿ, ಕ್ರೈಸ್ತರ ಮನೆಗಳಲ್ಲಿ ಕ್ರಿಸ್ಮಸ್ ಗೋದಲಿ, ನಕ್ಷತ್ರಗಳ ಸಾಲು ರಾರಾಜಿಸುತ್ತಿವೆ. ಹಬ್ಬದ ಹಿನ್ನೆಲೆಯಲ್ಲಿ ನಗರದ ವಿವಿಧ ಚರ್ಚ್ಗಳನ್ನು ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.
ಕ್ರೈಸ್ತರ ಮನೆ, ಚರ್ಚ್ಗಳಲ್ಲಿ ಕ್ರಿಸ್ಮಸ್ನ ಆಕರ್ಷಕ ಗೋದಲಿಗಳನ್ನು ನಿರ್ಮಿಸಲಾಗಿದೆ. ಗೋದಲಿ (ಕ್ರಿಬ್ ಸೆಟ್), ಮನೆ, ಮನೆಯ ಆವರಣ, ಚರ್ಚ್ಗಳನ್ನು ಅಲಂಕರಿಸುವ ನಕ್ಷತ್ರಗಳು, ಘಂಟೆ (ಬೆಲ್)ಗಳ ಸಾಲು, ಕ್ರಿಸ್ಮಸ್ ಟ್ರೀ, ಸಾಂತಕ್ಲಾಸ್ ವೇಷಭೂಷಣ, ಅಲಂಕಾರಿಕ ವಸ್ತುಗಳ ಮಾರಾಟ ಕರಾವಳಿಯಲ್ಲಿ ಜೋರಾಗಿದೆ. ಇನ್ನು ಉಭಯ ಜಿಲ್ಲೆಗಳಲ್ಲಿ ಕ್ರಿಸ್ಮಸ್ ಹಬ್ಬದ ತಯಾರಿ ಜೋರಾಗಿ ನಡೆದಿದ್ದು, ಕ್ರಿಸ್ಮಸ್ ಸಂಭ್ರಮಾಚರಣೆಗೆ ಕರಾವಳಿ ಸಂಪೂರ್ಣ ಸಿದ್ಧಗೊಂಡಿದೆ.