ಮಂಗಳೂರು, ಡಿ.25(DaijiworldNews/AA): ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿರುವ ಚರ್ಚ್ಗಳು, ತಡ ರಾತ್ರಿ ವಿಶೇಷ ಪ್ರಾರ್ಥನೆ. ಆಕರ್ಷಣೀಯ ಗೋದಲಿಗಳು, ಅವುಗಳ ಸುತ್ತ ನಕ್ಷತ್ರಗಳ ಮಿಂಚು! ಏಸು ಕ್ರಿಸ್ತರ ಜನ್ಮ ಸ್ಮರಣೆಯ ಕ್ರಿಸ್ಮಸ್ ಹಬ್ಬವನ್ನು ಕ್ರೈಸ್ತ ಬಾಂಧವರು ಕರಾವಳಿಯಾದ್ಯಂತ ಶ್ರದ್ಧಾಪೂರ್ವಕವಾಗಿ ಆಚರಿಸಿ ಸಂಭ್ರಮಿಸಿದರು.







ಮಧ್ಯರಾತ್ರಿ ವೇಳೆಯಲ್ಲಿ ಕ್ರಿಸ್ತ ಜನಿಸಿದ ನೆನಪು ಸ್ಮರಿಸಿ ಚರ್ಚ್ಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುವ ಸಂಪ್ರದಾಯವಿದ್ದು, ಸಹಸ್ರ ಸಂಖ್ಯೆಯಲ್ಲಿ ಕ್ರೈಸ್ತರು ಬಲಿಪೂಜೆಯಲ್ಲಿ ಭಾಗವಹಿಸಿದ್ದರು.
ದ.ಕ. ಜಿಲ್ಲೆಯ ಮಂಗಳೂರು ಧರ್ಮಪ್ರಾಂತಕ್ಕೆ ಒಳಗೊಂಡ ವಿವಿಧ ಚರ್ಚ್ಗಳನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿತ್ತು. ಕ್ರೈಸ್ತರ ಮನೆಗಳಲ್ಲಿ, ವಿವಿಧ ಚರ್ಚ್ಗಳ ಆವರಣದಲ್ಲಿ ಗೋದಲಿ ನಿರ್ಮಿಸಲಾಗಿತ್ತು. ರಾತ್ರಿ ವೇಳೆ ಚರ್ಚ್ಗಳಲ್ಲಿ ಕ್ಯಾರೊಲ್ ಗಾಯನದ ಮೂಲಕ ಕ್ರಿಸ್ತ ಜನನ ಸ್ಮರಿಸಿ ಬಲಿಪೂಜೆ, ಪ್ರಾರ್ಥನೆ ನಡೆದವು. ಹಲವು ದಿನಗಳ ತಯಾರಿಯ ಬಳಿಕ ಮಂಗಳವಾರ ರಾತ್ರಿ ಕ್ರಿಸ್ಮಸ್ ಜಾಗರಣೆಯ ಮೂಲಕ ಸಡಗರದಿಂದ ಆಚರಿಸಲಾಯಿತು.
ಮಂಗಳೂರು ಧರ್ಮಪ್ರಾಂತದ ಬಿಷಪ್ ರೈ| ರೆ|ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ರೊಸಾರಿಯೊ ಕೆಥೆಡ್ರಲ್ನಲ್ಲಿ ಕ್ರಿಸ್ಮಸ್ ಹಬ್ಬದ ಬಲಿಪೂಜೆ ಅರ್ಪಿಸಿ ಕ್ರಿಸ್ತ ಜನನದ ಮಹತ್ವ ಹಾಗೂ ಕ್ರಿಸ್ಮಸ್ ಸಂದೇಶ ನೀಡಿದರು.
ನಗರದ ಪ್ರಮುಖ ಚರ್ಚ್ಗಳಾದ ರೊಸಾರಿಯೋ ಕೆಥೆಡ್ರಲ್, ಮಿಲಾಗ್ರಿಸ್, ಉರ್ವ, ಬಿಜೈ, ಬೆಂದೂರ್ ವೆಲ್, ಕುಲಶೇಖರ, ಶಕ್ತಿನಗರ, ಬಿಕರ್ನಕಟ್ಟೆ, ಕೂಳೂರು, ಅಶೋಕನಗರ, ವಾಮಂಜೂರು, ಬೋಂದೆಲ್ ಹಾಗೂ ಗ್ರಾಮಾಂತರದ ಪುತ್ತೂರು, ಬಂಟ್ವಾಳ, ಮುಡಿಪು, ಪೆರ್ಮಾನ್ನೂರು ಸೇರಿದಂತೆ ಎಲ್ಲ ಚರ್ಚ್ಗಳಲ್ಲಿ ಭಕ್ತರು ಸಹಸ್ರ ಸಂಖ್ಯೆಯಲ್ಲಿ ಬಲಿಪೂಜೆಯಲ್ಲಿ ಭಾಗವಹಿಸಿದರು.
ಕ್ರಿಸ್ಮಸ್ ಹಿನ್ನೆಲೆಯಲ್ಲಿ ವಿದೇಶ, ದೂರದೂರುಗಳಲ್ಲಿರುವ ಕ್ರೈಸ್ತ ಬಾಂಧವರು ಊರಿಗೆ ಮರಳಿದ್ದು ಕುಟುಂಬದೊಂದಿಗೆ ಸೇರಿ ಹಬ್ಬ ಆಚರಣೆಯಲ್ಲಿ ತೊಡಗಿಕೊಂಡರು. ಹಬ್ಬದ ಹಿನ್ನೆಲೆಯಲ್ಲಿ ಚರ್ಚ್ಗಳಲ್ಲಿ ಎಂದಿಗಿಂತಲೂ ಹೆಚ್ಚಿನ ಜನಸ್ತೋಮವಿತ್ತು. ಬಲಿಪೂಜೆಯ ಬಳಿಕ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡುವುದು ಕಂಡುಬಂತು.
ಇನ್ನು ಕೆಲವು ಚರ್ಚ್ಗಳಲ್ಲಿ ಐಸಿವೈಎಂ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಮನೋರಂಜನಾ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.
ಬುಧವಾರ ಬೆಳಗ್ಗಿನಿಂದಲೇ ಚರ್ಚ್ಗಳಲ್ಲಿ ಹಬ್ಬದ ಬಲಿ ಪೂಜೆ, ಶುಭಾಶಯಗಳ ವಿನಿಮಯ ನಡೆಯುವುದು. ಮನೆಗಳಲ್ಲಿ ಕ್ರಿಸ್ಮಸ್ ವಿಶೇಷ ತಿಂಡಿ ತಿನಿಸು 'ಕುಸ್ವಾರ್' ತಯಾರಿಸಿ ನೆರೆಹೊರೆಯರೊಂದಿಗೆ ವಿನಿಮಯ ಮಾಡುವುದು ಕಂಡುಬಂತು. ಹಬ್ಬದ ಭೋಜನದೊಂದಿಗೆ ಸಂಭ್ರಮ ಇಮ್ಮಡಿಗೊಂಡಿತು.
ಇನ್ನು ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮದ ಮುಚ್ಚಿರಪದವುನಲ್ಲಿರುವ ಫಾತಿಮಾ ಮಾತೆಯ ದೇವಾಲಯದಲ್ಲಿ ಕ್ರಿಸ್ ಮಸ್ ಹಬ್ಬದ ಬಲಿಪೂಜೆಯನ್ನು ಬಹು ವಿಜೃಂಭಣೆಯಿಂದ ನೆರವೇರಿಸಲಾಯಿತು. ಈ ಬಲಿಪೂಜೆಯನ್ನು ಪ್ರಧಾನ ಗುರುಗಳಾಗಿ ಮಂಗಳೂರು ಧರ್ಮಪ್ರಾಂತ್ಯದ ಪ್ರೊಕ್ಯೂರೇಟರ್ ಆಗಿರುವ ವಂ. ಜಗದೀಶ್ ಪಿಂಟೊ ಹಾಗೂ ಚರ್ಚ್ ಧರ್ಮಗುರುಗಳಾದ ವಂ. ಸೈಮನ್ ಡಿಸೋಜ ನೆರವೇರಿಸಿದರು.
ತದನಂತರ ನಡೆದ ಕಾರ್ಯಕ್ರಮದಲ್ಲಿ ವಂ. ಜಗದೀಶ್ ಪಿಂಟೊ, ಪ್ರೊಕ್ಯೂರೇಟರ್ ಮಂಗಳೂರು ಧರ್ಮಪ್ರಾಂತ್ಯ, ವಂ. ಸೈಮನ್ ಡಿಸೋಜ, ಧರ್ಮಗುರುಗಳು, ಫಾತಿಮಾ ಮಾತೆಯ ದೇವಾಲಯ, ಉಪಾಧ್ಯಕ್ಷರಾದ ಡೆನಿಸ್ ಮೊಂತೇರೊ, ಕಾರ್ಯದರ್ಶಿ ವೈಲೆಟ್ ಕುವೆಲ್ಲೊ, ಎಲ್ಲಾ ಆಯೋಗಗಳ ಸಂಯೋಜಕರಾದ ರಾಲ್ಫ್ ಡಿಸೋಜ ಹಾಗೂ ಕಥೋಲಿಕ್ ಸಭಾ ಪೆರುವಾಯಿ ಘಟಕದ ಅಧ್ಯಕ್ಷರಾದ ಸುನಿಲ್ ಡಿಸೋಜ ಉಪಸ್ಥಿತರಿದ್ದರು.