ಮೈಸೂರು, ಡಿ 2: ಚುನಾವಣಾ ಸಮಯದಲ್ಲಿ ಕ್ಯಾಸ್, ಕ್ಯಾಸ್ಟ್ಲೆಸ್ಗೆ ಮಹತ್ವ ಕೊಡಬರಾದು. ಸಂವಿಧಾನದಡಿ ಹೋಗುವವರು ಜನಪ್ರತಿನಿಧಿಗಳು. ನಾವು ನಮ್ಮ ಜ್ಞಾನ ಉಪಯೋಗಿಸಿ ಜನರ ಸೇವೆ ಮಾಡಬೇಕು ಎಂದು ಪಕ್ಷದ ಸಂಸ್ಥಾಪಕ, ನಟ ಉಪೇಂದ್ರ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಸಂವಿಧಾನದಡಿ ಆಯ್ಕೆಯಾಗುವ ಜನಪ್ರತಿನಿಧಿಗಳು ಪಾರದರ್ಶಕ -ಭ್ರಷ್ಟಾಚಾರ ರಹಿತ ಆಡಳಿತ ಕೊಟ್ಟು ಜನರ ಸೇವೆ ಮಾಡಬೇಕು. ರಾಜಕಾರಣದಲ್ಲಿ ದುಡ್ಡು ಹಾಕಿ, ದುಡ್ಡು ಮಾಡೋದಕ್ಕೆ ಇದು ಬಿಸಿನೆಸ್ ಅಲ್ಲ ಎಂದು ತಿಳಿಸಿದರು.
ನಾವು ಜನರಿಗೆ ಬೇಕಾದ ಆಡಳಿತ ಕೊಡಬೇಕು. ಮತದಾರರು ಇನ್ನೆಷ್ಟು ವರ್ಷ ಕಾಲ ಹಾಗೆಯೇ ಇರುತ್ತಾರೆ. ಐದು ವರ್ಷಕ್ಕೆ ಒಮ್ಮೆ ಚುನಾವಣೆ ಬಂದಾಗ ವೋಟ್ ಹಾಕಿ ಕೂರಬಾರದು. ನಮ್ಮಿಂದ ಆರಿಸಿ ಹೋದವನು ಸದಾ ಜನರ ಬಳಿ ಇರುವಂತೆ ಬಯಸಬೇಕು. ಸಮಾಜವನ್ನು ಬದಲಾಯಿಸಬೇಕು ಎಂದು ಹೇಳಿದರು.
ಜನ ನಕಾರಾತ್ಮಕವಾಗಿ ಯೋಚಿಸುವ ಬದಲಿಗೆ ಸಕಾರಾತ್ಮಕವಾಗಿ ಚಿಂತನೆ ಮಾಡಬೇಕು. ಎಲ್ಲರೂ ಹಣ ಪಡೆದುಕೊಂಡು ವೋಟ್ ಹಾಕಲ್ಲ, ಎಲ್ಲರು ಜಾತಿಗೆ ಮಣೆ ಹಾಕಲ್ಲ, ಧರ್ಮ ನೋಡಲ್ಲ. ಇವರೆಲ್ಲರ ಮಧ್ಯೆ ಯಾವುದೇ ಸಹವಾಸ ಬೇಡವೆಂದು ದೂರ ಉಳಿಯುವ ಜನರನ್ನು ನಾವು ಕರೆತರಬೇಕಿದೆ. ನಾವು ನಾಯಕರಾಗಬೇಕು ಅಂದುಕೊಳ್ಳದೇ ನಾಯಕರನ್ನು ತಯಾರು ಮಾಡಬೇಕು. ನಾವು ಬರೀ ಕಾರ್ಮಿಕರಷ್ಟೇ. ನಮ್ಮಲ್ಲಿ ತಿಳಿದ ವರ್ಗ, ಬುದ್ಧಿವಂತರು, ವಿದ್ಯಾವಂತರು ಇದ್ದಾರೆ. ಅಂತವರಿಗೆ ಅವಕಾಶ ಕಲ್ಪಿಸಿಕೊಟ್ಟರೆ ಅನುಕೂಲ ಎಂದು ಹೇಳಿದರು.
ಪ್ರಜಾಕೀಯಕ್ಕೆ ಚಿತ್ರರಂಗದ ಅನೇಕ ಹಿರಿಯರು, ಸಮಾನ ಮನಸ್ಕರು ಬೆನ್ನುತಟ್ಟಿ ಪ್ರೋತ್ಸಾಹ ನೀಡಿದ್ದಾರೆ. ಚಿತ್ರರಂಗದ ಗಣ್ಯರು ಬೆಂಬಲ ಕೊಟ್ಟಿದ್ದಾರೆ ಹೊರತು ಸೇರಿಕೊಳ್ಳುವ ಬಗ್ಗೆ ಮಾತಾಡಿಲ್ಲ. ಮೈಸೂರಿನ ರಾಜವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ನಮ್ಮ ಪಕ್ಷಕ್ಕೆ ಬೆಂಬಲ ಸೂಚಿಸಿದ್ದಾರೆ ಎಂದು ತಿಳಿಸಿದರು.