ಮೂಲ್ಕಿ, ಜೂ 8 (Daijiworld News/MSP): ಹಳೆಯಂಗಡಿ ಕದಿಕೆ ಎಂಬಲ್ಲಿ ಮೂರು ದೈವಸ್ಥಾನ ಮತ್ತು ಎರಡು ಮನೆಗಳಲ್ಲಿ ಸರಣಿ ಕಳ್ಳತನ ನಡೆದ ಬಗ್ಗೆ ವರದಿಯಾಗಿದ್ದು ಕಳ್ಳರು ಲಕ್ಷಾಂತರ ಮೌಲ್ಯದ ಸೊತ್ತುಗಳನ್ನು ದೋಚಿದ್ದಾರೆ. ಜೂ.08 ರ ಶುಕ್ರವಾರ ರಾತ್ರಿಯಿಂದ ಶನಿವಾರ ಬೆಳಗಿನ ಜಾವದ ಒಳಗೆ ಕಳ್ಳತನ ನಡೆದಿರುವ ಸಂಶಯವನ್ನು ಸ್ಥಳೀಯರು ವ್ಯಕ್ತಪಡಿಸಿದ್ದು, ಸ್ಥಳಕ್ಕೆ ಮೂಲ್ಕಿ ಠಾಣಾ ಪೊಲೀಸರು, ಬೆರಳಚ್ಚು, ಶ್ವಾನದಳ ಭೇಟಿಕೊಟ್ಟಿದ್ದು ಪರಿಶೀಲನೆ ನಡೆಸಿದ್ದಾರೆ.
ಕದಿಕೆಯಲ್ಲಿರುವ ದೈವಸ್ಥಾನಗಳಾದ ಸುವರ್ಣ ಮೂಲಸ್ಥಾನ, ಸಾಲ್ಯಾನ್ ಮೂಲಸ್ಥಾನಕ್ಕೆ ಮತ್ತು ಸನಿಹ ಮನೆಗೆ ಕಳ್ಳರು ನುಗ್ಗಿ ದೈವಸ್ಥಾನಕ್ಕೆ ಸೇರಿದ ಚಿನ್ನದ ಕರಿಮಣಿ ಸರ, ಬೆಳ್ಳಿಯ ಸಾಮಾಗ್ರಿ ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ್ದಾರೆ. ಮಾತ್ರವಲ್ಲದೆ ಕಾಣಿಕೆ ಡಬ್ಬಿಯನ್ನು ಎಗರಿಸಿದ್ದಾರೆ.
ಸಾಲ್ಯಾನ್ ಮೂಲಸ್ಥಾನ ಇತ್ತೀಚೆಗೆ ತಾನೆ ಜೀರ್ಣೋದ್ಧಾರಗೊಂಡಿತ್ತು. ಇನ್ನು ಸುವರ್ಣ ಮೂಲಸ್ಥಾನದಲ್ಲಿ ದೈವಗಳಿಗೆ ಕೆಲ ದಿನಗಳ ಹಿಂದೆಯಷ್ಟೇ ನೇಮೋತ್ಸವ ನಡೆದಿದ್ದು ಕಾಣಿಕೆ ಡಬ್ಬಿಯಲ್ಲಿ ಅಪಾರ ಹಣ ಸಂಗ್ರಹವಾಗಿತ್ತು. ಮುಂದಿನ ವಾರ ಕಾಣಿಕೆ ಡಬ್ಬಿ ತೆರೆಯಲು ದೈವಸ್ಥಾನ ಆಡಳಿತ ಮಂಡಳಿ ನಿರ್ಧರಿಸಿತ್ತು. ಕಳ್ಳತನಗೈದ ಕಾಣಿಕೆಯ ಡಬ್ಬಿಯ ಹಣವನ್ನು ದೋಚಿ ಡಬ್ಬಿಯನ್ನು ಪಕ್ಕದ ಗದ್ದೆಯಲ್ಲಿ ಎಸೆದುಹೋಗಿದ್ದಾರೆ ಎಂದು ತಿಳಿದುಬಂದಿದೆ.