ಮಂಗಳೂರು,ಡಿ.25(DaijiworldNews/TA): ವಳಚ್ಚಿಲ್ನ ಎಕ್ಸ್ಪರ್ಟ್ ಪಿಯು ಕಾಲೇಜಿನಲ್ಲಿ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮ ಮತ್ತು ಸಡಗರದಿಂದ ಆಚರಿಸಲಾಯಿತು. ಸಮಾರಂಭವನ್ನು ಡೈಜಿವರ್ಲ್ಡ್ ಮೀಡಿಯಾದ ಸಂಸ್ಥಾಪಕ ಮತ್ತು ಪ್ರಧಾನ ಸಂಪಾದಕರಾದ ವಾಲ್ಟರ್ ನಂದಳಿಕೆ ಉದ್ಘಾಟಿಸಿ, ಮೇಣದಬತ್ತಿಗಳನ್ನು ಬೆಳಗಿಸಿ ಚಾಲನೆ ನೀಡಿದರು.



ಡೈಜಿವರ್ಲ್ಡ್ ಮೀಡಿಯಾದ ಸಂಸ್ಥಾಪಕ ವಾಲ್ಟರ್ ನಂದಳಿಕೆ ಅವರು ತಮ್ಮ ಭಾಷಣದಲ್ಲಿ, ಎಲ್ಲಾ ಧರ್ಮಗಳನ್ನು ಒಳಗೊಳ್ಳುವ ಶಿಕ್ಷಣದ ಬಗ್ಗೆ ಕಾಲೇಜಿನ ಸಮಗ್ರ ದೃಷ್ಟಿಕೋನವನ್ನು ಶ್ಲಾಘಿಸಿದರು. ಸಮಾಜದಲ್ಲಿ ಐಕ್ಯತೆ, ಶಾಂತಿ ಮತ್ತು ಸೌಹಾರ್ದತೆಯನ್ನು ಬೆಳೆಸಲು ಪ್ರತಿಯೊಬ್ಬರೂ ಕ್ರಿಸ್ಮಸ್ನಿಂದ ಪ್ರೇರಣೆ ಪಡೆಯಬೇಕೆಂದು ಅವರು ಹೇಳಿದರು. ನೆರೆದವರಿಗೆ ಕ್ರಿಸ್ಮಸ್ ಶುಭಾಶಯಗಳನ್ನು ಕೋರಿದರು. ದೀಪಿಕಾ ಎ ನಾಯಕ್, ತಮ್ಮ ಭಾಷಣದಲ್ಲಿ, ಧಾರ್ಮಿಕ ಸಾಮರಸ್ಯದ ಮಹತ್ವವನ್ನು ತಿಳಿಸಿದರು.
ವಳಚಿಲ್ನ ಎಕ್ಸ್ಪರ್ಟ್ ಪಿಯು ಕಾಲೇಜಿನ ಪ್ರಾಂಶುಪಾಲ ಡಾ ಎನ್ ಕೆ ವಿಜಯನ್ ಕರಿಪ್ಪಲ್ ಅವರು ಮುಖ್ಯ ಅತಿಥಿಗಳನ್ನು ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು. ಆರ್ಕಿಟೆಕ್ಟ್, ದೀಪಿಕಾ ಎ ನಾಯಕ್ ಅತಿಥಿಗಳನ್ನು ಸ್ಮರಣಿಕೆ ನೀಡಿ ಗೌರವಿಸಿದರು.
ಕಾರ್ಯಕ್ರಮದ ಸಂಚಾಲಕ ಶಿವಪ್ಪ ಎಸ್ ಪಿ, ಮಾರ್ಗದರ್ಶಕಿ ಅನಿತಾ ಪಿ ಶೆಟ್ಟಿ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ದೃತಿ ವಿ ಹೆಗ್ಡೆ ಹಾಗೂ ಇತರ ಅಧ್ಯಾಪಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಕ್ರಿಸ್ಮಸ್ ಕರೋಲ್ ಗಾಯನ ಮತ್ತು ನೃತ್ಯ ಪ್ರದರ್ಶನಗಳು ನಡೆದವು, ಇದು ಹಬ್ಬದ ಉತ್ಸಾಹವನ್ನು ಹೆಚ್ಚಿಸಿತು. ಕಾರ್ಯಕ್ರಮವನ್ನು ಪ್ರಣತಿ ಬಿ ಭಟ್ ಮತ್ತು ಪ್ರಥಮ ಪಿಯುಸಿಯ ಭಾವೀಶ್ ಬೆನಕ ನಿರೂಪಿಸಿದರು. ವಿದ್ಯಾರ್ಥಿ ಸಂಸತ್ತಿನ ಉಪಾಧ್ಯಕ್ಷ ಪಾವನಿ ರಜನೀಶ್ ವರ್ಮಾ ವಂದಿಸಿದರು.