ಕುಂದಾಪುರ, ಡಿ.25(DaijiworldNews/TA): ಪರಸ್ಪರ ಪ್ರೀತಿ ಸಹಬಾಳ್ವೆಯ ಸಂದೇಶವೇ ಕ್ರಿಸ್ಮಸ್ ಹಬ್ಬ. ಶಾಂತಿಯ ಜೊತೆಗೆ ದೈವತ್ವವನ್ನು ಹಂಚಿಕೊಳ್ಳುವುದೇ ಕ್ರಿಸ್ಮಸ್. ಯೇಸು ಕ್ರಿಸ್ತನ ಜನ್ಮದಿನವನ್ನು ಸಂಭ್ರಮಿಸಿ ಜೀಸಸ್ ಕ್ರೈಸ್ಟ್ ಹಾಕಿಕೊಟ್ಟ ಆದರ್ಶಗಳನ್ನು ಪಾಲಿಸಿದರೆ ಜಗತ್ತು ನೆಮ್ಮದಿ ಹೊಂದಲು ಸಾಧ್ಯ ಎಂದು ಸೇಂಟ್ ಪಿಯುಸ್ ಚರ್ಚ್ ಹಂಗಳೂರು ಇದರ ಧರ್ಮಗುರುಗಳಾದ ರೆ.ಫಾ. ಆಲ್ಬರ್ಟ್ ಕ್ರಾಸ್ತ್ ಹೇಳಿದರು.

ಅವರು ಕುಂದಾಪುರ ತಾಲೂಕಿನ ಯಡಾಡಿ ಮತ್ಯಾಡಿಯ ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ಕುಂದಾಪುರ ಇದರ ಅಂಗ ಸಂಸ್ಥೆಗಳಾದ ಸುಜ್ಞಾನ್ ಪಿಯು ಕಾಲೇಜು, ವಿದ್ಯಾರಣ್ಯ (ಲಿಟಲ್ ಸ್ಟಾರ್) ಇಂಗ್ಲಿಷ್ ಮೀಡಿಯಂ ಸ್ಕೂಲ್ ಸಹಯೋಗದಲ್ಲಿ ವಿದ್ಯಾರಣ್ಯ ಕ್ಯಾಂಪಸ್ ನಲ್ಲಿ ಮಂಗಳವಾರ ಡಿಸೆಂಬರ್ 24ರಂದು ವಿದ್ಯಾರ್ಥಿಗಳು ಹಾಗೂ ಪೋಷಕರಿಗಾಗಿ ಕ್ರಿಸ್ಮಸ್ ಹಬ್ಬದ ಆಚರಣೆ ಯ ಪ್ರಯುಕ್ತ ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಂದೇಶ ನೀಡಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯೆ ಜುಡಿತ್ ಮೆಂಡೋನ್ಸಾ ಅತಿಥಿಗಳಾಗಿ ಭಾಗವಹಿಸಿದ್ದರು. ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ಕಾರ್ಯದರ್ಶಿ ಪ್ರತಾಪಚಂದ್ರ ಶೆಟ್ಟಿ, ಸುಜ್ಞಾನ್ ಪಿಯು ಕಾಲೇಜು ಪ್ರಿನ್ಸಿಪಾಲ್ (ಪ್ರಭಾರ) ಆಗಿರುವ ರಂಜನ್ ಶೆಟ್ಟಿ, ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ಖಜಾಂಚಿ ಭರತ್ ಶೆಟ್ಟಿ, ವಿದ್ಯಾರಣ್ಯ ಶಾಲೆ ಮುಖ್ಯೋಪಾಧ್ಯಾಯ ಪ್ರದೀಪ್ ಕೆ ಉಪಸ್ಥಿತರಿದ್ದರು.
ಶಿಕ್ಷಕಿ ರೋಸಮ್ಮ ಕ್ರಿಸ್ಮಸ್ ಸಂದೇಶವನ್ನು ಸಾರಿದರು. ಬಳಿಕ ವಿದ್ಯಾರ್ಥಿಗಳು ಕ್ರಿಸ್ಮಸ್ ಗೀತೆ ಹಾಡಿದರು. ವಿವಿಧ ನೃತ್ಯಾವಳಿ, ಮತ್ತು ಯೇಸು ಜನನದ ಬಗ್ಗೆ ರೂಪಕಗಳನ್ನು ಪ್ರದರ್ಶಿಸಿದರು. ವಿದ್ಯಾರ್ಥಿಗಳೇ ಸೃಷ್ಟಿಸಿದ ಕ್ರಿಸ್ತ ಹುಟ್ಟಿದ ಗೋದಲಿ (ಹಟ್ಟಿ) ಅತ್ಯಾಕರ್ಷಣೀಯವಾಗಿತ್ತು. ಹತ್ತನೇ ತರಗತಿ ವಿದ್ಯಾರ್ಥಿನಿಯರಾದ ಪ್ರವ್ಯಾ ಶೆಟ್ಟಿ ಸ್ವಾಗತಿಸಿ, ಫಾತಿಮಾ ನಜೀಫಾ ಕಾರ್ಯಕ್ರಮ ನಿರೂಪಿಸಿದರು. 9ನೇ ತರಗತಿಯ ಅನೀಶ್ ವಂದಿಸಿದರು.