ಉಡುಪಿ,ಡಿ.26(DaijiworldNews/TA): ಹೆಬ್ರಿ ತಾಲೂಕಿನ ಪಡುಕುಡೂರು ಎಂಬ ಗ್ರಾಮದ ಕಥೆಯಿದು. ಇಲ್ಲಿನ ಸುಂದರ ಪೂಜಾರಿ ಎಂಬವರಿಗೆ ಮೂರು ಮಕ್ಕಳಲ್ಲಿ ಬೋಜ ಪೂಜಾರಿ ಒಬ್ಬ ಗಂಡು ಮಗ. ಆತ ಯಾವುದೋ ಒಂದು ಕಾರಣಕ್ಕೆ ಮನೆ ಬಿಟ್ಟು ಹೋಗುತ್ತಾನೆ. ಹೋದವ ಬರೋಬ್ಬರಿ 28 ವರ್ಷ ಮನೆ ಕಡೆ ತಲೆ ಹಾಕಿಲ್ಲ, ಸಂಪರ್ಕವೇ ಇಲ್ಲ. ಬದುಕಿದ್ದಾನೋ ಸತ್ತಿದ್ದಾನೋ ಎಂಬ ಮಾಹಿತಿಯೂ ಕುಟುಂಬಕ್ಕಿಲ್ಲ. ತಂದೆ-ತಾಯಿ, ಸೋದರಿಯರು ದೈವ ದೇವರ ಮುಂದೆ ಮಾಡಿದ ಪ್ರಾರ್ಥನೆ, ಹೊತ್ತ ಹರಕೆ ಈಗ ಫಲಕೊಟ್ಟಿದೆ. ಮನೆ ಮಗ ಬೋಜ ಪೂಜಾರಿ ಮನೆಗೆ ಬಂದಿದ್ದಾನೆ. 80ರ ಹರೆಯದ ತಂದೆಯ ಬೇಸರ ಕಳೆದು ಮೊಗದಲ್ಲಿ ನಗು ಮೂಡಿದೆ.


ಕಳೆದ ಹಲವಾರು ವರ್ಷಗಳಿಂದ ವಿವಿಧ ದೈವ ದೇವರ ಮೊರೆ ಹೋಗಿದ್ದ ತಂದೆ ಸುಂದರ ಪೂಜಾರಿಯವರು ರೂಢ ಪ್ರಶ್ನೆಯಲ್ಲಿ ಕೇಳಿದರೂ ಮಗನ ಪತ್ತೆ ಇರಲಿಲ್ಲ.. ಕೊನೆಯದಾಗಿ ತಾನೆ ಸೇವೆ ಸಲ್ಲಿಸುವ ಬ್ರಹ್ಮ ಬೈದರ್ಕಳರ ಮುಂದೆ ಅಳಲು ತೋಡಿಕೊಂಡಿದ್ದರು..
ವರ್ಷದೊಳಗೆ ಮಗ ಮರಳಿ ಬರುವನೆಂದು ಕಾರಣಿಕದ ಕೋಟಿ ಚೆನ್ನಯ್ಯ ದೈವ ಅಭಯ ನೀಡಿತ್ತು.. ಕೋಟಿ ಚೆನ್ನಯ್ಯ ದೈವದ ಅಭಯ ದೊರಕಿದ ಕೆಲವೇ ತಿಂಗಳಲ್ಲಿ ಮಗ ಮನೆಗೆ ವಾಪಸ್ ಆಗಿದ್ದಾನೆ. ಪಡುಕುಡೂರಿನ ಭದ್ರಕಾಳಿ, ಕೊಡಮಣಿತ್ತಾಯ, ಬ್ರಹ್ಮ ಬೈದರ್ಕಳ ಗುಡಿಗೆ ತನ್ನ 12ನೇ ವಯಸ್ಸಿನಿಂದ ಇಂದಿನವರೆಗೆ ಸಲ್ಲಿಸುತ್ತಿರುವ ಚಾಕರಿಗೆ ಫಲ ಸಿಕ್ಕಿದೆ ಎಂದು ಮನೆ, ಊರು ಸಂಭ್ರಮಪಟ್ಟಿದೆ. ಮಾತು ಮತ್ತು ದೈಹಿಕವಾಗಿ ಸಂಪೂರ್ಣ ಬದಲಾಗಿದ್ದ ಬೋಜ ಪೂಜಾರಿಯನ್ನು ತಂದೆ ಪತ್ತೆ ಹಚ್ಚಿದ್ದು, ಕೈಯಲ್ಲಿರುವ ಒಂದು ಗುಳ್ಳೆಯಿಂದ. ಮದುವೆಯಾಗಿ ಪತ್ನಿ, ಮಗಳ ಜೊತೆ ಹುಬ್ಬಳ್ಳಿಯಲ್ಲಿ ಸಂಸಾರ ಮಾಡಿಕೊಂಡಿರುವ ಬೋಜ ಅವರಿಗೆ ಮತ್ತೆ ತನ್ನ ಹುಟ್ಟೂರಿನ ಕಡೆ ಒಲವು ಮೂಡಿದೆ. ಊರಿಗೆ ಬಂದು ನೆಲೆ ಕಂಡುಕೊಳ್ಳುವ ಆಸೆ ಹುಟ್ಟಿದೆ.
ಈ ಬಗ್ಗೆ ಕಾಣೆಯಾಗಿದ್ದ ಮಗ ಬೋಜ ಪೂಜಾರಿಯಲ್ಲಿ ವಿಚಾರಿಸಿದಾಗ, ಸಾಮಾಜಿಕ ಜಾಲತಾಣ ಒಂದರಲ್ಲಿ ತಂದೆಯ ಮುಖ ನೋಡಿ ವಾಪಸ್ ಆಗಿರುವುದಾಗಿ ಹೇಳಿದ್ದು, ವರ್ಷದ ಹಿಂದೆ ಊರ ಕಂಬಳ ನಡೆದಾಗ ಯೂಟ್ಯೂಬರ್ ಮುಂದೆ ತಂದೆ ಸುಂದರ ಪೂಜಾರಿ ಮಾತನಾಡಿದ್ದರು.
ಕಂಬಳದ ಬಗ್ಗೆ ಮಾತನಾಡಿದ್ದ ಸುಂದರ ಪೂಜಾರಿ ಅವರ ಮಾತನ್ನು ಕೇಳಿ ತನ್ನ ವೃದ್ಧ ತಂದೆಯ ಬಗ್ಗೆ ತಿಳಿದು ಬೋಜ ಪೂಜಾರಿ ಭಾವುಕನಾಗಿದ್ದು, ತನ್ನ ತಂದೆ ಇನ್ನೂ ಬದುಕಿದ್ದಾರೆ ಎಂದು ಸಂತೋಷಪಟ್ಟಿದ್ದಾರೆ. ಹೀಗಾಗಿ ಕುಟುಂಬದವರನ್ನು ಕಾಣಲು ಊರಿಗೆ ಮರಳಿರುವುದಾಗಿ ಭೋಜ ಪೂಜಾರಿ ಹೇಳಿದ್ದಾರೆ. ಇಲ್ಲಿಯತನಕ ಹುಬ್ಬಳ್ಳಿಯಲ್ಲಿ ಹೋಟೆಲ್ ಕೆಲಸ ಮಾಡಿಕೊಂಡಿದ್ದ ಭೋಜ ಪೂಜಾರಿ ಅವರು ಕಳೆದ ಮೂರು ದಶಕಗಳಿಂದ ರಾಜ್ಯದ ಹಲವೆಡೆ ಹೋಟೆಲ್ ಕೆಲಸ ಮಾಡಿಕೊಂಡಿದ್ದರು. ಮಗ ಮನೆಗೆ ಮರಳುತ್ತಿದ್ದಂತೆ ಕೈಯಲ್ಲಿರುವ ಗಾಯದ ಗುರುತು ಕಂಡು ಇವ ತನ್ನ ಮಗನೇ ಎಂದು ತಂದೆ ದೃಢಪಡಿಸಿದ್ದಾರೆ.
ಸದ್ಯ ಕೋಟಿ ಚೆನ್ನಯ್ಯ ದೈವಗಳ ಕಾರ್ಣಿಕಕ್ಕೆ ಊರಿನ ಜನ ಅಚ್ಚರಿ ವ್ಯಕ್ತಪಡಿಸಿದ್ದು, ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಪಡುಕುಡೂರು ವ್ಯಾಪ್ತಿಯಲ್ಲಿ ನಡೆದ ಘಟನೆಗೆ ಎಲ್ಲರೂ ಮೂಕವಿಸ್ಮಿತರಾಗಿದ್ದಾರೆ.