ಕಾಸರಗೋಡು,ಡಿ.27(DaijiworldNews/TA): ಕಾಸರಗೋಡಿನ ಪೆರಿಯ ಯುವ ಕಾಂಗ್ರೆಸ್ ಕಾರ್ಯಕರ್ತರಾದ ಶರತ್ ಮತ್ತು ಕೃಪೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎರ್ನಾಕುಲಂ ಸಿಬಿಐ ನ್ಯಾಯಾಲಯವು ಡಿಸೆಂಬರ್ 28 ರಂದು ತೀರ್ಪು ನೀಡಲಿದೆ.

ಪ್ರಕರಣದಲ್ಲಿ ಉದುಮ ಮಾಜಿ ಶಾಸಕ ಕೆ.ವಿ.ಕುಂಞಿರಾಮನ್, ಕಾಞಂಗಾಡು ಬ್ಲಾಕ್ ಪಂಚಾಯತ್ ಅಧ್ಯಕ್ಷ ಕೆ.ಮಣಿಕಂಠನ್, ಸಿಪಿಎಂ ಪೆರಿಯ ಸ್ಥಳೀಯ ಸಮಿತಿ ಮಾಜಿ ಕಾರ್ಯದರ್ಶಿ ಎನ್.ಬಾಲಕೃಷ್ಣನ್, ಪಾಕ್ಕಂ ಮಾಜಿ ಸ್ಥಳೀಯ ಕಾರ್ಯದರ್ಶಿ ರಾಘವನ್ ವೆಲುತೊಳ್ಳಿ ಸೇರಿದಂತೆ 24 ಮಂದಿ ಆರೋಪಿಗಳಿದ್ದಾರೆ.
ಪ್ರಕರಣದ ಮೊದಲ ಆರೋಪಿ ಸ್ಥಳೀಯ ಸಮಿತಿ ಮಾಜಿ ಸದಸ್ಯ ಪೀತಾಂಬರನ್ ಸೇರಿದಂತೆ 14 ಮಂದಿಯನ್ನು ಕ್ರೈಂ ಬ್ರಾಂಚ್ ಹಾಗೂ ಕೆವಿ ಕುಂಞಿರಾಮನ್ ಸೇರಿದಂತೆ 10 ಮಂದಿಯನ್ನು ಸಿಬಿಐ ಬಂಧಿಸಿತ್ತು. 2019 ರ ಫೆ. 17 ರಂದು ರಾತ್ರಿ ಪೆರಿಯ ಕಲ್ಯೋಟ್ ನಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಶರತ್ ಲಾಲ್ ಮತ್ತು ಕೃಪೇಶ್ ರನ್ನು ಕೊಲೆಗೈಯ್ಯಲಾಗಿತ್ತು. ಇನ್ನು ನಾಳೆ ತೀರ್ಪು ಹೊರಬೀಳುವ ಹಿನ್ನೆಲೆಯಲ್ಲಿ ಪೆರಿಯ ವ್ಯಾಪ್ತಿಯಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.