ಕುಂದಾಪುರ, ಡಿ.27(DaijiworldNews/AA): ಸಾಸ್ತಾನ ಟೋಲ್ನಲ್ಲಿ ಸ್ಥಳೀಯ ನಿವಾಸಿಗಳಿಗೆ ಟೋಲ್ ಶುಲ್ಕ ವಿಧಿಸುವ ಅಧಿಕಾರಿಗಳ ನಿರ್ಧಾರದ ವಿರುದ್ಧ ಸಾಸ್ತಾನ, ಕೋಟ ಮತ್ತು ಸುತ್ತಮುತ್ತಲಿನ ಸ್ಥಳೀಯರಿಂದ ಡಿಸೆಂಬರ್ 31ರಂದು ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ.

ಟೋಲ್ ಬೂತ್ನಿಂದ 5 ಕಿಲೋಮೀಟರ್ ಸುತ್ತಲಿನ ಸ್ಥಳೀಯ ವಾಹನಗಳಿಗೆ ಉಚಿತ ಪ್ರವೇಶ ಹಾಗೂ ಟೋಲ್ ಶುಲ್ಕದಿಂದ ವಿನಾಯಿತಿ ನೀಡಲಾಗಿತ್ತು. ಆದರೆ ಇತ್ತೀಚಿನ ಬೆಳವಣಿಗೆಗಳಿಂದ ಟೋಲ್ ಬೂತ್ ಅಧಿಕಾರಿಗಳು ವಿನಾಯಿತಿ ರದ್ದು ಪಡಿಸಿ ಸ್ಥಳೀಯ ವಾಹನಗಳಿಗೂ ಟೋಲ್ ವಿಧಿಸುವ ನಿರ್ಧಾರ ಕೈಗೊಂಡಿದ್ದಾರೆ. ಈಗಾಗಲೇ ಈ ಹಿಂದೆ ವಿನಾಯಿತಿ ನೀಡಿದ್ದ ವಾಣಿಜ್ಯ ಸ್ಥಳೀಯ ವಾಹನಗಳಿಗೆ ಟೋಲ್ ಶುಲ್ಕ ಪಾವತಿಸುವಂತೆ ತಿಳಿಸಲಾಗಿದ್ದು, ಕೆಲ ದಿನಗಳ ಹಿಂದಷ್ಟೇ ವಾಣಿಜ್ಯ ವಾಹನ ಮಾಲೀಕರು ಪ್ರತಿಭಟನೆ ನಡೆಸಿದ್ದರು. ಇದಕ್ಕೂ ಮುನ್ನ ಸ್ಥಳೀಯರು ರಾಷ್ಟ್ರೀಯ ಹೆದ್ದಾರಿ ಹಾಗೂ ಟೋಲ್ ಪ್ಲಾಜಾದಲ್ಲಿ ಸೂಕ್ತ ನಿರ್ವಹಣೆ ಹಾಗೂ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಿದ್ದರು.
ಇನ್ನು ದೈಜಿವರ್ಲ್ಡ್ ನ ಅಲ್ವಿನ್ ಅಂದ್ರಾದೆ ಅವರೊಂದಿಗೆ ಮಾತನಾಡಿದ ಟೋಲ್ ವಿರೋಧಿ ಸಮಿತಿಯ ನಾಯಕ, ನವಯುಗ ಟೋಲ್ವೇಸ್ ಪ್ರೈವೇಟ್ ಲಿಮಿಟೆಡ್ನಿಂದ ಸ್ವಾಧೀನಪಡಿಸಿಕೊಂಡ ನಂತರ, ಹೊಸ ಕಂಪನಿಯು ಎಲ್ಲಾ ವಿನಾಯಿತಿಗಳನ್ನು ತೆಗೆದುಹಾಕಿದೆ ಮತ್ತು ಸ್ಥಳೀಯ ವಾಹನಗಳಿಂದ ಟೋಲ್ ಶುಲ್ಕವನ್ನು ಸಂಗ್ರಹಿಸಲು ಪ್ರಾರಂಭಿಸಿದೆ. ಈ ನಿರ್ಧಾರವನ್ನು ವಿರೋಧಿಸಿ ಕೆಲ ದಿನಗಳ ಹಿಂದೆಯೇ ಪ್ರತಿಭಟನೆ ನಡೆಸಿದ್ದು, ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಮಧ್ಯಸ್ಥಿಕೆ ಮೇರೆಗೆ ಸ್ಥಳೀಯ ವಾಹನಗಳ ಟೋಲ್ ಶುಲ್ಕ ವಸೂಲಿಯನ್ನು ಡಿ.30ರವರೆಗೆ ಸ್ಥಗಿತಗೊಳಿಸಿದ್ದು, ಡಿ.30ರಂದು ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಿಗದಿಯಾಗಿದೆ. ಈ ಸಭೆಯಲ್ಲಿ ಕಂಪನಿ ಪ್ರತಿನಿಧಿಗಳು, ಸ್ಥಳೀಯ ಪ್ರತಿನಿಧಿಗಳು, ಸಂಸದರು, ಶಾಸಕರು ಉಪಸ್ಥಿತರಿರುವರು. ಸ್ಥಳೀಯ ನಿವಾಸಿಗಳ ಮೇಲೆ ಯಾವುದೇ ಪ್ರತಿಕೂಲ ನಿರ್ಧಾರವನ್ನು ತೆಗೆದುಕೊಂಡರೆ ನಾವು ಡಿಸೆಂಬರ್ 31 ರಂದು ಬೃಹತ್ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.