ಉಡುಪಿ, ಡಿ.27(DaijiworldNews/AA): ಸಮಾಜ ಸೇವಕ ವಿಶು ಶೆಟ್ಟಿ ಅವರು ಡಿಸೆಂಬರ್ 26 ರಂದು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿಯು ಚೇತರಿಸಿಕೊಂಡ ಬಳಿಕ ಆತನನ್ನು ಕುಟುಂಬದೊಂದಿಗೆ ಮತ್ತೆ ಸೇರಿಸಿದ್ದಾರೆ.

ಉಡುಪಿಯ ಕಲ್ಪನಾ ಟಾಕೀಸ್ ಬಳಿ ದಾರಿಹೋಕರ ಮೇಲೆ ಹಲ್ಲೆ ನಡೆಸಿ ಆತಂಕ ಸೃಷ್ಟಿಸಿದ್ದ ಮಾನಸಿಕ ಅಸ್ವಸ್ಥನೊಬ್ಬ ಗುಣಮುಖವಾಗಿ ಇದೀಗ ಕೋಲ್ಕತ್ತಾದಲ್ಲಿರುವ ತನ್ನ ಕುಟುಂಬವನ್ನು ಸೇರಿದ್ದಾನೆ. ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಅವರು ಸಾರ್ವಜನಿಕರ ನೆರವಿನೊಂದಿಗೆ ವ್ಯಕ್ತಿಯನ್ನು ರಕ್ಷಿಸಿ ಬಾಳಿಗಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದರು. ಇದೀಗ ಆತ ಚೇತರಿಸಿಕೊಂಡ ಬಳಿಕ ಅವನ ಊರಿಗೆ ಕಳುಹಿಸಲಾಯಿತು.
ವ್ಯಕ್ತಿಯನ್ನು ಕೋಲ್ಕತ್ತಾದ ಸತೀಂದರ್ ಸಿಂಗ್ ಎಂದು ಗುರುತಿಸಲಾಗಿದೆ. ಅವರು ಕೆಲಸಕ್ಕಾಗಿ ಉಡುಪಿಗೆ ಬಂದಿದ್ದರು. ಆದರೆ ಈ ವೇಳೆ ಮಾನಸಿಕ ಆರೋಗ್ಯ ಸಮಸ್ಯೆಗೆ ತುತ್ತಾಗಿದ್ದಾರೆ. ಬಳಿಕ ಅವರ ನಡವಳಿಕೆಯಲ್ಲಿ ಸಾಕಷ್ಟು ಬದಲಾವಣೆಗಳಾದವು. ಇದರಿಂದಾಗಿ ಸಾರ್ವಜನಿಕರು ತೊಂದರೆಗೀಡಾಗುವುದು ಮಾತ್ರವಲ್ಲದೆ ಅವರಲ್ಲಿ ಆತಂಕ ಸೃಷ್ಟಿಸಿತು. ನಂತರ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ. ವಿಶು ಶೆಟ್ಟಿ ಅವರು ಮಧ್ಯ ಪ್ರವೇಶಿಸಿ ಅವರನ್ನು ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯ ಸಂದರ್ಭದಲ್ಲಿ, ಸಿಂಗ್ ಕಬ್ಬಿಣದ ವಸ್ತುವನ್ನು ನುಂಗಲು ಪ್ರಯತ್ನಿಸಿದರು ಮತ್ತು ಸ್ವಯಂ-ಹಾನಿ ಬೆದರಿಕೆ ಸೇರಿದಂತೆ ದುಃಖಕರ ಹೇಳಿಕೆಗಳನ್ನು ನೀಡಿದ್ದರು.
ಸತೀಂದರ್ ಸಿಂಗ್ ಅವರು ಚೇತರಿಸಿಕೊಂಡ ನಂತರ ಅವರ ಕುಟುಂಬದ ಸಂಪರ್ಕ ವಿವರಗಳನ್ನು ಆಸ್ಪತ್ರೆಯ ಸಿಬ್ಬಂದಿಗೆ ಒದಗಿಸಿದರು. ಸತೀಂದರ್ ಸಿಂಗ್ ಅವರು ತಾನು ಮನೆಗೆ ಹಿಂದಿರುಗಬೇಕೆಂಬ ಬಯಕೆಯನ್ನು ವ್ಯಕ್ತಪಡಿಸಿದರು. ಬಳಿಕ ಆಸ್ಪತ್ರೆಯು ಅವನ ಹೆಂಡತಿಯನ್ನು ಸಂಪರ್ಕಿಸಿತು. ಆದರೆ, ಈ ದಂಪತಿಗೆ ಚಿಕ್ಕ-ಚಿಕ್ಕ ಮಕ್ಕಳು ಇರುವ ಕಾರಣ ಅವರ ಹೆಂಡತಿ ಉಡುಪಿಗೆ ಆಗಮಿಸಲು ಸಾಧ್ಯವಾಗಲಿಲ್ಲ. ತನ್ನ ಪತಿಯನ್ನು ರೈಲಿನಲ್ಲಿ ಮನೆಗೆ ಕಳುಹಿಸುವಂತೆ ಆಕೆ ಕೋರಿದ್ದಾಳೆ.
ಇದಕ್ಕೆ ಪ್ರತಿಕ್ರಿಯಿಸಿದ ವಿಶು ಶೆಟ್ಟಿ ಅವರು ಸತೀಂದರ್ ಸಿಂಗ್ ಅವರನ್ನು ಮಂಗಳೂರು ರೈಲು ನಿಲ್ದಾಣಕ್ಕೆ ಕರೆದೊಯ್ದು ಕೋಲ್ಕತ್ತಾಗೆ ರೈಲು ಹತ್ತಲು ವ್ಯವಸ್ಥೆ ಮಾಡಿದರು. ಬರಿಗೈಯಲ್ಲಿ ಪ್ರಯಾಣಿಸಲು ಕಷ್ಟಪಡುತ್ತಿದ್ದ ಸತೀಂದರ್ ಸಿಂಗ್ ಅವರಿಗೆ ವಿಶು ಶೆಟ್ಟಿ ಅವರಿಗೆ ರೈಲು ಟಿಕೆಟ್ ಮತ್ತು ಅವರ ಖರ್ಚಿಗಾಗಿ 7,500 ರೂ. ನೀಡಿದ್ದಾರೆ.
ಸತೀಂದರ್ ಸಿಂಗ್ ಅವರ ಚಿಕಿತ್ಸೆಗೆ ತಗುಲಿದ್ದ 9,600 ರೂ. ಯಲ್ಲಿ ದಾನಿ ಗಿರೀಶ್ 7,000 ರೂ., ನೀಡಿದರೆ ಉಳಿದ ಮೊತ್ತವನ್ನು ವಿಶು ಶೆಟ್ಟಿ ಅವರೇ ಭರಿಸಿದ್ದರು. ವಿಶು ಶೆಟ್ಟಿಯವರ ಈ ಕಾರ್ಯಕ್ಕೆ ಸಾರ್ವಜನಿಕರು ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ವಿಶು ಶೆಟ್ಟಿ ಅವರಿಗೆ ಸಾಮಾಜಿಕ ಕಾರ್ಯಕರ್ತ ಹರೀಶ್ ಉದ್ಯಾವರ್ ಕೂಡ ನೆರವು ನೀಡಿದ್ದಾರೆ.