ಮಂಗಳೂರು, ಡಿ.28(DaijiworldNews/AA): ಹೊಸ ವರ್ಷದ ಹಿನ್ನೆಲೆಯಲ್ಲಿ ಬೋಳಾರದಲ್ಲಿ ಡಿ. 27ರ ರಾತ್ರಿ ಇಸ್ರೇಲ್ನ ಕಲಾವಿದ ಸಜಂಕಾ ಅವರಿಂದ ನಡೆಯಬೇಕಾಗಿದ್ದ ಕಾರ್ಯಕ್ರಮಕ್ಕೆ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ ವಿರೋಧ ವ್ಯಕ್ತಪಡಿಸಿತ್ತು. ಈ ಹಿನ್ನಲೆ ಅವರ ಕಾರ್ಯಕ್ರಮವನ್ನು ರದ್ದು ಮಾಡಿ ಬೇರೆ ಕಲಾವಿದರ ಮೂಲಕ ಕಾರ್ಯಕ್ರಮ ನಡೆಸಲಾಯಿತು.

ಡಿಜೆ ಪಾರ್ಟಿಗಳಲ್ಲಿ ಡ್ರಗ್ಸ್ ಮಾಫಿಯಾದಿಂದಾಗಿ ಯುವಕ ಯುವತಿಯರ ಭವಿಷ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಅಪಾಯವಿದೆ. ಅಲ್ಲದೆ ಸಜಂಕಾ ಹಿಂದೂ ದೇವರ ಬಗ್ಗೆ ವಿಡಂಬನೆ ಮಾಡಿದ್ದಾರೆ. ಹಾಗಾಗಿ ಅವರ ಕಾರ್ಯಕ್ರಮಕ್ಕೆ ಅವಕಾಶ ನೀಡಬಾರದು ಎಂದು ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ ಪೊಲೀಸ್ ಇಲಾಖೆಗೆ ಮನವಿ ಮಾಡಿಕೊಂಡಿತ್ತು.
ಸಜಂಕಾ ಕಾರ್ಯಕ್ರಮ ನಡೆದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ಕೂಡನೀಡಲಾಗಿತ್ತು. ಈ ಹಿನ್ನೆಲೆ ಪೊಲೀಸರು ಸಜಂಕಾ ಕಾರ್ಯಕ್ರಮಕ್ಕೆ ಅನುಮತಿ ನೀಡಲು ನಿರಾಕರಿಸಿದ್ದಾರೆ. ಇನ್ನು ಸಜಂಕಾ ಅವರು ಡಿ.27ರಂದೇ ಮಂಗಳೂರಿಗೆ ಬಂದಿದ್ದರೂ ಕಾರ್ಯಕ್ರಮ ನೀಡದೇ ಹೊಟೇಲ್ನಲ್ಲೇ ಉಳಿದುಕೊಂಡಿದ್ದರು.