ಮಂಗಳೂರು,29(DaijiworldNews/TA): ಕಂಬಳ ತುಳುನಾಡ ವೀರಕ್ರೀಡೆ, ದೈವ ದೇವರ ಕ್ರೀಡೆ, ಯಾರಿಂದಲೂ ನಿಲ್ಲಿಸಲು ಸಾಧ್ಯವಿಲ್ಲ ಎಂದು ಪುತ್ತೂರು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.

ಮಂಗಳೂರು ಕಂಬಳದಲ್ಲಿ ಮಾತನಾಡಿದ ಅವರು, ಬೆಂಗಳೂರು ಕಂಬಳ ನಡೆಸಬಾರದು ಎಂದು ಪೆಟಾದವರು ಹೈಕೋರ್ಟ್ ನಲ್ಲಿ ದಾವೆ ಹೂಡಿದ್ದಾರೆ. ಹೈಕೋರ್ಟ್ ಅಲ್ಲ, ಸುಪ್ರೀಂ ಕೋರ್ಟ್ ನಲ್ಲೂ ದಾವೆ ಹೂಡಿದರೂ ಪೆಟಾದವರಿಗೆ ಏನು ಮಾಡಲು ಸಾಧ್ಯವಿಲ್ಲ. ಯಾಕೆಂದರೆ ಈಗಾಗಲೇ ಸುಪ್ರೀಂ ಕೋರ್ಟ್ ನಲ್ಲಿ ಪಂಚ ಸದಸ್ಯ ಪೀಠದಲ್ಲೂ ಕಂಬಳ ಪರವಾಗಿ ತೀರ್ಪು ನೀಡಿದೆ. ಹಾಗಾಗಿ ಕಂಬಳ ನಿಷೇಧಿಸಲು ಪೆಟಾ ಸಾಧ್ಯವೇ ಇಲ್ಲ ಎಂದು ತಿಳಿಸಿದ್ದಾರೆ.
ಬೆಂಗಳೂರು ಕಂಬಳ ವೇಳೆ ದೂರದ ಊರುಗಳಿಂದ ಎತ್ತುಗಳನ್ನು ಲಾರಿಗಳಲ್ಲಿ ಎತ್ತುಗಳನ್ನು ತರುವಾಗ ನೀರು-ಆಹಾರ ನೀಡದೆ ಅವುಗಳಿಗೆ ಹಿಂಸೆ ನೀಡಲಾಗುತ್ತದೆ ಎಂದು ಆರೋಪಿಸಿ ಪೆಟಾದವರು ಹೈಕೋರ್ಟ್ ನಲ್ಲಿ ಅಫಿಡವಿಟ್ ಸಲ್ಲಿಸಿದ್ದಾರೆ. ಆದರೆ ಸುಪ್ರೀಂ ಕೋರ್ಟ್ ಈಗಾಗಲೇ ಕಂಬಳ ಪರವಾಗಿ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ಕಂಬಳ ನಿಷೇಧ ಹೇರಲು ಸಾಧ್ಯವಿಲ್ಲ. ಕಂಬಳ ತುಳುನಾಡ ವೀರಕ್ರೀಡೆ, ದೈವ ದೇವರ ಕ್ರೀಡೆಯಾಗಿದ್ದು, ಯಾರಿಂದಲೂ ಇದನ್ನು ನಿಲ್ಲಿಸಲು ಸಾಧ್ಯವಿಲ್ಲ. ಕಂಬಳ ಆಯೋಜಿಸಿದವರು ಇಂದು ದೊಡ್ಡ ದೊಡ್ಡ ಅಲಂಕರಿಸಿದ್ದಾರೆ. ನಾನು ಕೂಡ ಉಪ್ಪಿನಂಗಡಿ ಕಂಬಳ ಆಯೋಜಿಸುವ ಮೂಲಕ ಶಾಸಕನಾಗುವ ಭಾಗ್ಯ ಲಭಿಸಿದೆ.
ಬ್ರಿಜೇಶ್ ಚೌಟ ಹಾಗೂ ಕಿಶೋರ್ ಬೊಟ್ಯಾಡಿ ಕೂಡ ಕಂಬಳದಲ್ಲಿ ಭಾಗಿಯಾಗಿ ಉನ್ನತ ಸ್ಥಾನಕ್ಕೇರಿದ್ದಾರೆ. ಇಂದು ದ.ಕ., ಉಡುಪಿ ಜಿಲ್ಲೆಗಳಲ್ಲಿ ಆಯೋಜಿಸುವ ಕಂಬಳಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ.ಗಳ ಅನುದಾನ ಕೂಡ ಲಭಿಸಿದೆ. ತುಳು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಘೋಷಿಸಬೇಕು. ಈ ಬಗ್ಗೆ ವಿಧಾನಸಭೆಯಲ್ಲಿ ಹೋರಾಟ ನಡೆಸಲಾಗುತ್ತಿದೆ ಎಂದು ಇದೇ ವೇಳೆ ಅವರು ತಿಳಿಸಿದರು.