ಮಂಗಳೂರು,ಜೂ09(DaijiWorldNews/AZM): ಪೂಜಿಸುವ ಗೋವುಗಳು ಯಾವುದು ಎಂದು ಹಿಂದು ಸ್ವಾಮೀಜಿಗಳು ಹೇಳಲಿ, ನಾವು ಖಂಡಿತಾ ಆ ಗೋವುಗಳನ್ನು ತಿನ್ನುವುದಿಲ್ಲ ಎಂದು ಖ್ಯಾತ ವಾಗ್ಮಿ ಎಸ್.ಬಿ.ದಾರಿಮಿ ಹೇಳಿದ್ದಾರೆ.
ಈ ಕುರಿತು ಡೈಜಿ ವಲ್ಡ್ ನಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು ಸತ್ತ ಪ್ರಾಣಿಯ ಮಾಂಸ ತಿನ್ನಬಾರದು, ಕದ್ದ ಪ್ರಾಣಿಯ ಮಾಂಸ ತಿನ್ನಬಾರದು ಎಂದು ಹೊಸದಾಗಿ ಪತ್ವಾ ಕೊಡುವ ಅಗತ್ಯವಿಲ್ಲ. 1400 ವರ್ಷದ ಮೊದಲೇ ಕುರ್ ಆನಿನಲ್ಲಿ ಇದನ್ನು ಸ್ಪಷ್ಟವಾಗಿ ಪ್ರವಾದಿಯವರೇ ಹೇಳಿದ್ದಾರೆ. ದನಕಳ್ಳತನ ಎಲ್ಲರೂ ಮಾಡುತ್ತಾರೆ ಅದಕ್ಕೆ ಸರಿಯಾದ ಕಾನೂನು ಮಾಡಬೇಕು ಎಂದರು.
ಗೋ- ಹತ್ಯೆ ನಿಷೇಧ ಕಾನೂನು ತಂದರೂ ಸ್ವಾಗತಿಸುತ್ತೇವೆ. ಆದರೆ ಅದಕ್ಕೆ ಇಚ್ಚಾಶಕ್ತಿ ಬೇಕು. ರಾಜಕೀಯ ಮಾಡಲು ಇದನ್ನು ಇನ್ನೂ ಜೀವಂತ ಇರಿಸುತ್ತಾರೆ. ಯಾರಿಗೂ ಈ ಸಮಸ್ಯೆಯ ಪರಿಹಾರ ಅಗತ್ಯವಿಲ್ಲ. ಏನಿಲ್ಲದಿದ್ದರೂ, ಪೂಜಿಸುವ ಗೂವು ಯಾವುದು ಎಂದು ಹಿಂದು ಸ್ವಾಮೀಜಿಗಳು ಹೇಳಲಿ, ನಾವು ಖಂಡಿತಾ ಆ ಗೋವುಗಳನ್ನು ತಿನ್ನುವುದಿಲ್ಲ ಎಂದು ಹೇಳಿದರು.
ಚಾರ್ಮಾಡಿಯಲ್ಲಿ ನಡೆದ ಘಟನೆ ಬಹಳ ಅಘಾತಕಾರಿ ಮತ್ತು ನೋವು ತಂದಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಆ ಘಟನೆಯನ್ನು ಖಂಡಿಸಿ ಬಜರಂಗದಳ ಪ್ರತಿಭಟನೆ ಮಾಡಿದರೂ ನಾನು ಅವರೊಂದಿಗೆ ಸೇರುತ್ತೇನೆ. ಬಜರಂಗದಳದವರು ಕರೆದರೂ ಅಲ್ಲಿ ಭಾಷಣ ಮಾಡುತ್ತೇನೆ ಎಂದು ಎಸ್.ಬಿ.ದಾರಿಮಿ ಹೇಳಿದರು.
ಗೋವು ಈಗ ಧರ್ಮಕ್ಕಿಂತ ಹೆಚ್ಚಾಗಿ ರಾಜಕೀಯ ವಸ್ತುವಾಗಿದೆ. ಗೋಹತ್ಯೆ ಆಗಬೇಕು ಮತ್ತು ಕಳ್ಳತನವಾಗಬೇಕು ಎಂದು ಬಯಸುವ ರಾಜಕೀಯ ಪಕ್ಷಗಳು ಇಲ್ಲಿವೆ. ಈ ಮೂಲಕ ಅವರಿಗೆ ಓಟ್ ಬ್ಯಾಂಕ್ ಗಟ್ಟಿಗೊಳ್ಳುತ್ತದೆ. ಪ್ರಾಮಾಣಿಕ ಇಚ್ಚಾಶಕ್ತಿ ಇದ್ದರೆ ಈಗ ಕೇಂದ್ರದಲ್ಲಿ ಗೋಮಾತೆಯ ರಕ್ಷಕರ ಸರಕಾರವಿದೆ. ಅವರು ನಿಷೇಧದ ಕಾನೂನು ತಂದರೆ ನಾವು ಒಪ್ಪುತ್ತೇವೆ. ಸವಾಲು ಹಾಕುತ್ತೇನೆ ಅವರು ಗೋಹತ್ಯೆ ಕಾನೂನು ಜಾರಿಗೆ ಮಾಡುವುದಿಲ್ಲ ಕಾರಣ ಕೃಷಿ ಪ್ರಧಾನವಾದ ದೇಶದಲ್ಲಿ ಅದು ಪ್ರಾಯೋಗಿಕವಲ್ಲ ಎಂದ ಎಸ್.ಬಿ.ದಾರಿಮಿ, ಗೋ ಮಾರುವ ಬ್ರಾಹ್ಮಣರಿದ್ದಾರೆ. ಅವರಿಗೆ ಗೋವುಗಳನ್ನು ಮಾರಲು ಬ್ಯಾರಿ ಬೇಕು. ಇಲ್ಲಿ ಸಮಸ್ಯೆ ಇರುವುದು ಗೋವು ಅಲ್ಲ. ಇಲ್ಲಿ ಸಮಸ್ಯೆ ಇರುವುದು ಗೋವುಗಳ ಮೂಲಕ ರಾಜಕೀಯ ಮಾಡುವುದು ಎಂದರು.
ಎಲ್ಲಾ ಧರ್ಮೀಯರು ಜೊತೆ ಸೇರಿ ಚರ್ಚಿಸಿ ಇದಕ್ಕೆ ತಾರ್ಕಿಕ ಅಂತ್ಯ ಕೊಡಬೇಕು.ಗೋಮಾತೆಯನ್ನು ಸ್ವಾಮೀಜಿಗಳು ಗುರುತಿಸಿ ಕೊಡಲಿ, ನಾವು ಅದನ್ನು ತಿನ್ನುವುದಿಲ್ಲ. ಇಲ್ಲಿ ಎತ್ತು - ಹೋರಿ ಎಲ್ಲವೂ ಇದೆ. ಅದನ್ನು ನಾವು ತಿನ್ನುತ್ತೇವೆ. ಇನ್ನು ಗೋ ಹತ್ಯೆ ನಿಷೇದ ಆದರೆ ನಾವು ಆಡು, ಕೋಳಿ ತಿನ್ನುತ್ತೇವೆ. ಇಸ್ಲಾಮಿನಲ್ಲಿ ಮಾಂಸ ತಿನ್ನುವುದು ಮೂಲಭೂತ ಕರ್ಮವಲ್ಲ ಎಂದ ಎಸ್.ಬಿ.ದಾರಿಮಿ, ಕಳ್ಳತನ ಎಲ್ಲಾ ಧರ್ಮೀಯರು ಮಾಡುತ್ತಾರೆ. ಕಳ್ಳರಿಗೆ ಧರ್ಮವಿಲ್ಲ. ಕಳ್ಳರ ಕೈ ಕಡಿಯಲು ಇಸ್ಲಾಂ ಹೇಳುತ್ತದೆ ಎಂದು ತಿಳಿಸಿದರು.
ಗೋವುಗಳನ್ನು ರಕ್ಷಣೆ ಮಾಡುವ ನೆಪದಲ್ಲಿ ಕೆಲವು ಸಂಘಟನೆಯ ಕಾರ್ಯಕರ್ತರು ವ್ಯಾಪಾರ ಮಾಡಿದ್ದೂ ಇದೆ. ಮುಸ್ಲಿಮ್ ಹೆಸರು ಇದ್ದ ತಕ್ಷಣ ಅದು ರಾಜಕೀಯ ಲಾಭವಾಗುತ್ತದೆ . ಹಾಗಾಗಿ ಇದನ್ನು ಒಂದು ಅಜೆಂಡ ಮಾಡಲಾಗಿದೆ. ಈಗ ಅದರ ಅಗತ್ಯವಿಲ್ಲ. ಸರಕಾರ ಅವರದ್ದೇ ಬಂದಿದೆ. ತಕ್ಷಣ ಗೋಹತ್ಯೆ ನಿಷೇಧ ಮಾಡಿದರೆ ಉತ್ತಮ, ಇಲ್ಲವಾದರೆ ನಾವೇ ಹೋರಾಟ ಮಾಡಿ ನೈಜ ಗೋಭಕ್ತರಿಗೆ ನ್ಯಾಯ ಕೊಡಬೇಕಾದೀತು ಎಂದು ಅವರು ತಿಳಿಸಿದರು.