ಬಂಟ್ವಾಳ, ಡಿ.31 (DaijiworldNews/AK): ಮುರಳೀಧರ ಪ್ರಭು ವಗ್ಗ ಪೂರ್ಣಾನಂದ ಸೇವಾ ಪ್ರತಿಷ್ಠಾನ (ರಿ)ದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಶೈಕ್ಷಣಿಕ, ಸಾಮಾಜಿಕ, ಆರೋಗ್ಯ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ "ಸೇವಾ ಹಿ ಮಮ ಧರ್ಮ: " ಎಂಬ ಘೋಷ ವಾಕ್ಯದೊಂದಿಗೆ ಸುಸಂಸ್ಕೃತ, ಸುಸಂಘಟಿತ, ಸುಸಂಪನ್ನ ಸಮಾಜ ನಿರ್ಮಾಣದ ಗುರಿ ಇಟ್ಟುಕೊಂಡು ಅತ್ಯುತ್ತಮ ಸಮಾಜ ಸೇವೆ ಸಲ್ಲಿಸುತ್ತಿರುವ ಪ್ರತಿಷ್ಠಿತ ಸಂಘಟನೆಯಾದ ಪೂರ್ಣಾನಂದ ಸೇವಾ ಪ್ರತಿಷ್ಠಾನ (ರಿ)ದ ಸಭೆಯು ಬಂಟ್ವಾಳದ ಶ್ರೀ ಮಂಜುನಾಥ ಸ್ವಾಮಿ ಸಭಾಭವನದಲ್ಲಿ ಅಧ್ಯಕ್ಷರಾದ ಕೊಡಂಗೆ ವಿಜಯ ಶೆಣೈ ಅವರ ಅಧ್ಯಕ್ಷತೆಯಲ್ಲಿ ಜರಗಿತು.

ಸಭೆಯಲ್ಲಿ ಮುಂದಿನ ಅವಧಿಗೆ ನೂತನ ಅಧ್ಯಕ್ಷರಾಗಿ ಮುರಳೀಧರ ಪ್ರಭು ವಗ್ಗ ಹಾಗೂ ಪ್ರಧಾನ ಕಾರ್ಯದರ್ಶಿಗಳಾಗಿ ರವೀಂದ್ರ ನಾಯಕ್ ಶಕ್ತಿನಗರ ಇವರು ಸರ್ವಾನುಮತದಿಂದ ಆಯ್ಕೆಯಾದರು.ಜೊತೆಗೆ ಪದಾಧಿಕಾರಿಗಳ ನೂತನ ಆಡಳಿತ ಮಂಡಳಿಯನ್ನು ರಚಿಸಲಾಯಿತು.
ಮುರಳೀಧರ ಪ್ರಭು ವಗ್ಗ, ಇವರು ಬಡವ, ಬಲ್ಲಿದ, ಜಾತಿ, ಮತ ,ಧರ್ಮ, ಸಂಬಂಧಗಳ ಯಾವುದೇ ಭೇದಭಾವವಿಲ್ಲದೆ ಸದಾ ಎಲ್ಲರೊಂದಿಗೆ ಬೆರೆತು ಸರ್ವರನ್ನು ಸಮಾನ ದೃಷ್ಟಿಯಲ್ಲಿ ಕಾಣುವ ಆಪತ್ಬಾಂಧವ.
ಸುಮಾರು 30 ವರ್ಷಗಳಿಂದ ಯಾವುದೇ ಪ್ರತಿಫಲಾಪೇಕ್ಷೆ ಬಯಸದೆ ಸಮಾಜದ ಎಲ್ಲಾ ಸ್ತರದ ಜನರೊಂದಿಗೆ ಬೆರೆತು ಮಾದರಿ ಸೇವೆಯನ್ನು ಸಮಾಜಕ್ಕೆ ಸಲ್ಲಿಸುತ್ತಿದ್ದಾರೆ. ಸುಮಾರು ಹತ್ತು ವರ್ಷಗಳ ಕಾಲ ಹೊಸದಿಗಂತ ಪತ್ರಿಕೆಯಲ್ಲಿ ವೃತ್ತಿ ಜೀವನದ ಅನುಭವದಲ್ಲಿ ಶ್ರೀ ಪೂರ್ಣಾನಂದ ಪ್ರಾಕ್ಷಿಕ ಪತ್ರಿಕೆಯನ್ನು ನಡೆಸುತ್ತಿದ್ದರು. ಆರೋಗ್ಯ ಕ್ಷೇತ್ರದಲ್ಲಿ ಕೆಎಂಸಿ ಆಸ್ಪತ್ರೆಯ ಮುಖಾಂತರ ಸುಮಾರು 2000 ಕ್ಕಿಂತಲೂ ಹೆಚ್ಚಿನ ವಿಮಾ ಕಾರ್ಡುಗಳ ವಿತರಣೆ ವಿಮಾ ಸೌಲಭ್ಯ ಹಾಗೂ ಅನಾರೋಗ್ಯ, ಅಪಘಾತ, ಅವಘಡಗಳ ಸಂದರ್ಭದಲ್ಲಿ ಆಪದ್ಬಾಂಧವನಾಗಿ ತುರ್ತು ಆರೋಗ್ಯ ಸೇವೆಯನ್ನು ನೀಡುತ್ತಾ ಬಂದಿದ್ದಾರೆ.
ಹಲವಾರು ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ವೈದ್ಯಕೀಯ ತಪಾಸಣೆ ಹಾಗೂ ಮಾಹಿತಿ ನೀಡುವಂತಹ ಆರೋಗ್ಯ ಶಿಬಿರಗಳು, ರಕ್ತದಾನ ಶಿಬಿರಗಳು , ವ್ಯಕ್ತಿತ್ವ ವಿಕಸನ ಕೌಶಲ್ಯಾಭಿವೃದ್ಧಿ ಕಾರ್ಯಗಾರಗಳು,ಧಾರ್ಮಿಕ ಮುಂತಾದ ಸೇವಾ ಚಟುವಟಿಕೆಗಳಿಂದ ಜನಾನುರಾಗಿಯಾಗಿದ್ದಾರೆ. ಅವರ ಸೇವೆಯನ್ನು ಗುರುತಿಸಿ, ಮಂಗಳೂರಿನ ಕೆಎಂಸಿ ಆಸ್ಪತ್ರೆಯವರು 2019 ರಿಂದ ನಿರಂತರವಾಗಿ "TMA PAI ಆರೋಗ್ಯ ಸೇವಕ" ಪ್ರಶಸ್ತಿ ಪುರಸ್ಕಾರವನ್ನು ನೀಡಿ ಗೌರವಿಸುತ್ತಿದ್ದಾರೆ.
ಅವರು ನವೋದಯ ವಿವಿದ್ಧೋದ್ದೇಶ ಸಹಕಾರಿ ಬ್ಯಾಂಕ್ ನ ನಿರ್ದೇಶಕರಾಗಿ, ಕೂಡಿಬೈಲು ಮಹಮ್ಮಾಯಿ ದುರ್ಗಾಪರಮೇಶ್ವರಿ ದೇವಸ್ಥಾನದ ಮುಕ್ತೇಶರರಾಗಿ, ದ.ಕ ಜಿಲ್ಲಾ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಂಘದ ಸದಸ್ಯರಾಗಿ, ಪದಾಧಿಕಾರಿಯಾಗಿ, ಪೂರ್ಣಾನಂದ ಸೇವಾ ಪ್ರತಿಷ್ಠಾನದ ಸದಸ್ಯರಾಗಿ, ಪದಾಧಿಕಾರಿಯಾಗಿ, ಕಾವಳಪಡೂರು ಕೃಷಿ ಸಹಕಾರಿಯ ಸದಸ್ಯನಾಗಿ ...ಹೀಗೆ ಹಲವು ಸಂಘ ಸಂಸ್ಥೆಗಳಲ್ಲಿ ಸೇವೆಯನ್ನು ಸಲ್ಲಿಸಿ ಹುದ್ದೆಗಳನ್ನು ನಿಸ್ವಾರ್ಥತೆಯಿಂದ ನಿರ್ವಹಿಸಿದ ಅನುಭವ ಅವರದು.
ಪ್ರಗತಿಪರ ಕೃಷಿಕರಾಗಿ ಸಾವಯವ ಕೃಷಿಯಲ್ಲಿ ಉತ್ತಮ ಜ್ಞಾನ ಪಡೆದು ಕೃಷಿಕರ ಬಲವರ್ಧನೆಗೆ ಅರಿವು, ಹಲಸಿನ ಮೇಳದೊಂದಿಗೆ ಹಲಸಿನ ಮೌಲ್ಯವರ್ಧನೆ ಮೂಡಿಸಿ ಸರಕಾರ ಹಾಗೂ ಇತರ ಸಂಘ ಸಂಸ್ಥೆಗಳಿಗೆ ಕೃಷಿ ಕ್ಷೇತ್ರಕ್ಕೆ ಸಿಗುವ ಸಹಾಯ ಸವಲತ್ತು ಹಾಗೂ ಸೌಲಭ್ಯಗಳ ಮಾಹಿತಿ ನೀಡಿ, ಕೃಷಿಕರನ್ನು ಆರ್ಥಿಕವಾಗಿ ಸದೃಢರನ್ನಾಗಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಕೊಡಂಗೆ ವಿಜಯ್ ಶೆಣೈ ಅವರು ತನ್ನ ಅವಧಿಯಲ್ಲಿ ಸಹಕರಿಸಿದ ಎಲ್ಲರನ್ನು ಸ್ಮರಿಸಿ ಅಭಿನಂದನೆಗಳೊಂದಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು ಹಾಗೂ ನೂತನ ಆಡಳಿತ ಮಂಡಳಿಗೆ ಗೌರವಿಸಿ ಅಭಿನಂದನೆಗಳನ್ನು ಸಲ್ಲಿಸಿದರು.ಅಧ್ಯಕ್ಷರಾಗಿ ಆಯ್ಕೆಯಾದ ಮುರಳೀಧರ ಪ್ರಭುಗಳು ಎಲ್ಲರ ಸಹಕಾರವನ್ನು ಕೋರುತ್ತಾ ಸಮಾಜದ ಅಭಿವೃದ್ಧಿಗೆ ಶಕ್ತಿ ಮೀರಿ ದುಡಿಯುವ ಭರವಸೆಯನ್ನು ನೀಡಿದರು .ಪ್ರತಿಷ್ಠಾನದ ಕಾರ್ಯಕ್ಷೇತ್ರವನ್ನು ಇನ್ನೂ ಹೆಚ್ಚಿನ ಕ್ಷೇತ್ರಗಳಿಗೆ ವಿಸ್ತರಿಸುವಂತೆ ಪ್ರಯತ್ನಿಸಿ ಜನರಲ್ಲಿ ಸಮಾಜ ಸೇವೆಯ ಮನೋಭಾವನೆಯನ್ನು ಬೆಳೆಸಲು ಪ್ರಯತ್ನಿಸುವುದು ಈಗಿನ ಅನಿವಾರ್ಯ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಸಮಾಜದ ಹಿರಿಯರು ಹಾಗೂ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.