ಉಡುಪಿ, ಜೂ.9(DaijiWorldNews/AZM): ಬಂಟ್ವಾಳ ತಾಲೂಕಿನ ಪುದು ಗ್ರಾ.ಪಂ. ಸದಸ್ಯ ಹಾಗೂ ಮೀನಿನ ವ್ಯಾಪಾರಿ ಕೆ. ಮುಹಮ್ಮದ್ ರಿಯಾಝ್ (34) ಕೊಲೆಯತ್ನ ಪ್ರಕರಣದ ಆರೋಪಿಗಳು ಬೆಂಗಳೂರಿನಲ್ಲಿರುವ ಕುರಿತು ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿದ್ದು, ಈಗಾಗಲೇ ಬೆಂಗಳೂರಿಗೆ ಹೊರಟಿರುವ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಪ್ರಕರಣದ ತನಿಖೆಗಾಗಿ ಪೊಲೀಸರು ಮೂರು ತಂಡಗಳನ್ನು ರಚಿಸಿತ್ತು. ಆರೋಪಿಗಳು ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿರುವ ಮಾಹಿತಿ ಪಡೆದುಕೊಂಡ ಪೊಲೀಸರು,ಒಂದು ತಂಡವನ್ನು ಬೆಂಗಳೂರಿಗೆ ಕಳುಹಿಸಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಇಂದು ಸಂಜೆಯೊಳಗೆ ಆರೋಪಿಗಳ ಬಂಧನ ಆಗುವ ಸಾಧ್ಯತೆ ಇದೆ.
ಜೂ. 7ರಂದು ಮಲ್ಪೆ ಬಂದರಿಗೆ ಮೀನಿನ ವ್ಯಾಪಾರಕ್ಕೆ ಇತರ ಮೂವರೊಂದಿಗೆ ರಿಯಾಝ್ ಎಂಬವರು ಬಂದಿದ್ದು, ಅವರ ಮೇಲೆ ನಾಲ್ವರು ದುಷ್ಕರ್ಮಿಗಳು ತಲವಾರು ದಾಳಿ ನಡೆಸಿ ಕೊಲೆಗೆ ಯತ್ನಿಸಿದ್ದರು. ಹಾಗೂ ಆರೋಪಿಗಳು ಕಾರಿನಲ್ಲಿ ಬೆಂಗಳೂರಿಗೆ ಪರಾರಿಯಾಗಿದ್ದರು.