Karavali
ಉಡುಪಿ:' ಬಾರಕೂರಿನಲ್ಲಿ ಮಕ್ಕಳೇ ನಡೆಸುವ 'ಮಕ್ಕಳ ಸಾಹಿತ್ಯ ಹಬ್ಬ' - ಲೇಖಕ ರವೀ ಸಜಂಗದ್ದೆ
- Tue, Dec 31 2024 08:20:27 PM
-
ಉಡುಪಿ,ಡಿ.31 (DaijiworldNews/AK): ಸಕ್ಕರೆ ನಾಡು ಮಂಡ್ಯದಲ್ಲಿ ಅಕ್ಷರ ಜಾತ್ರೆ, ಜನ ಜಾತ್ರೆ, ಸಾಹಿತ್ಯ ಜಾತ್ರೆ ಇತ್ತಿಚೆಗೆ ಸಂಪನ್ನಗೊಂಡಿತು. ಮೂರು ದಿನಗಳ ಕಾಲ ಮಂಡ್ಯದ ಸಿಹಿ ನೆಲದಲ್ಲಿ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಲಕ್ಷಾಂತರ ಮಂದಿ ಸಾಕ್ಷೀಕರಿಸಿದರು. ಹಲವಾರು ಗೋಷ್ಠಿಗಳು, ಚಿಂತನ, ಮಂಥನ, ಭಾಷಣಗಳು, ಆಶಯಗಳು ವ್ಯಕ್ತವಾದವು. ಸಾವಿರಾರು ಲೇಖಕರ ಹೊಸ ಪುಸ್ತಕಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಕರ್ನಾಟಕ ಶೈಲಿಯ ಬಗೆ ಬಗೆಯ ಭಕ್ಷ್ಯಗಳು ಮಸ್ತಕ, ಹೃದಯ ಮತ್ತು ಉದರ ತಣಿಸಿ, ತುಂಬಿಸಿದವು. ಹಲವು ಹೊಸತನಗಳಿಗೆ ಸಾಕ್ಷಿಯಾದ ಸಂಭ್ರಮದ ಸಮ್ಮೇಳನ ಇತಿಹಾಸದ ಪುಟಗಳಲ್ಲಿ ದಾಖಲಾಯಿತು. ಹಲವು ಕನ್ನಡಪರ ನಿರ್ಣಯಗಳನ್ನು ಒಕ್ಕೊರಲಿನಿಂದ ತೆಗೆದುಕೊಳ್ಳಲಾಯಿತು. ಎಲ್ಲದರ ಒಟ್ಟು ಆಶಯ 'ಸಿರಿ ಕನ್ನಡಂ ಗೆಲ್ಗೆ; ಸಿರಿ ಕನ್ನಡಂ ಬಾಳ್ಗೆ'!
ನಾನೀಗ ಹೇಳ ಹೊರಟಿರುವುದು ಇದೇ ಮಾದರಿಯ, ಇಷ್ಟೇ ತೂಕದ, ಎರಡೂವರೆ ದಶಕಗಳ ಭವ್ಯ ಇತಿಹಾಸ-ಪರಂಪರೆ ಹೊಂದಿರುವ ಇನ್ನೊಂದು ವಿಶಿಷ್ಟ, ವಿಶೇಷ, ಅನನ್ಯ ಕನ್ನಡ ಸೇವಾ ಕೈಂಕರ್ಯದ ಬಗ್ಗೆ! ಅದುವೇ ಕಳೆದ ಇಪ್ಪತ್ತೈದು ವರ್ಷಗಳಿಂದ (ಕೊರೋನಾ ಸಮಯದ ಮೂರ್ನಾಲ್ಕು ವರ್ಷ ಹೊರತುಪಡಿಸಿ) ಉಡುಪಿ ಜಿಲ್ಲೆಯ ಬಾರಕೂರು ಪರಿಸರದಲ್ಲಿ ನಡೆಯುತ್ತಿರುವ, ಉಡುಪಿ ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗಾಗಿ, ಅತ್ಯಂತ ಮೌಲ್ವಿಕವಾಗಿ ಮತ್ತು ಯಶಸ್ವಿಯಾಗಿ ನಡೆದುಕೊಂಡು ಬರುತ್ತಿರುವ 'ಮಕ್ಕಳ ಸಾಹಿತ್ಯ ಸಮ್ಮೇಳನ'! ಮಕ್ಕಳಿಂದ, ಮಕ್ಕಳಿಗಾಗಿ, ಮಕ್ಕಳಿಗೋಸ್ಕರ ಮಕ್ಕಳೇ ನಡೆಸುವ, ನಿರ್ವಹಿಸುವ, ಪ್ರಸ್ತುತಪಡಿಸುವ ಕನ್ನಡ ಸಾಹಿತ್ಯ ಸಮ್ಮೇಳನ-ಜಾತ್ರೆ-ಹಬ್ಬ!
ಎಲ್ಲಕ್ಕಿಂತ ಮೊದಲು ಬಾರಕೂರಿನ ಭವ್ಯ ಇತಿಹಾಸದ ಬಗ್ಗೆ ಒಂದಿಷ್ಟು ಮಾಹಿತಿ. ಉಡುಪಿಯಿಂದ ಕುಂದಾಪುರ ಮಾರ್ಗವಾಗಿ ಸಾಗುವಾಗ ಬ್ರಹ್ಮಾವರ ಪೇಟೆ ಸಿಗುತ್ತದೆ. ಅಲ್ಲಿನ ಆಕಾಶವಾಣಿ ಸಮೀಪ ಬಲಕ್ಕೆ ಹೊರಳಿಕೊಂಡು ಮೂರು ಮೈಲಿ ತೆರಳುತ್ತಾ, ಮೌನವಾಗಿ ಹರಿಯುವ ಸೀತಾ ನದಿ ದಾಟಿದಾಗ ಸಿಗುವ ಒಂದು ಕಾಲದ ಸಾಂಸ್ಕೃತಿಕ ವೈಭವೋಪೇತ ನಗರ, ರಾಜಧಾನಿಯೇ ಬಾರಕೂರು! 'ತೌಳವ ವಿಭವದ ವಸನವನುಟ್ಟು ಬಿಂಕದಿ ನಿಂತಿದೆ ಬಾರಕೂರು' ಎನ್ನುವ ಕವಿವಾಣಿ 'ತುಳುನಾಡಿನ ವೈಭವೋಪೇತ ಸುಸಂಸ್ಕೃತಿಯ ಬದ್ಧತೆಯನ್ನು ಉಟ್ಟುಕೊಂಡು, ಬಿಂಕ ಬಿನ್ನಾಣದಿ ಕಂಗೊಳಿಸುತ್ತಿದೆ ರಾಜರ ಊರು' ಎಂಬುದಾಗಿ ಇತಿಹಾಸದ ಪುಟಗಳಲ್ಲಿ ಚೆಂದವಾಗಿ ದಾಖಲಾಗಿದೆ.
ರಾಜ ಮಹಾರಾಜರ ಆಳ್ವಿಕೆಯ ಕಾಲದಲ್ಲಿ ಭಾರೀ ವೈಭವಯುತವಾಗಿ, ಕಲಾತ್ಮಕ ಸ್ಮಾರಕಗಳಿಂದ, ದೇವಾಲಯಗಳಿಂದ ಈ ಪ್ರದೇಶ ಕಂಗೊಳಿಸುತ್ತಿತ್ತು ಎನ್ನುವುದನ್ನು ಸಾರುವ 'ಕಲ್ಚಪ್ರ' ('ಕಲ್ಲಿನ ಚಪ್ಪರ' ಪದದ 'ಕುಂದಾಪ್ರ ಭಾಷೆ'ಯ ಪದ) ದೇವಸ್ಥಾನಗಳ ನಾಡಿಗೆ ಪ್ರವಾಸಿಗರನ್ನು ಸ್ವಾಗತಿಸುತ್ತದೆ. ವಿಜಯ ನಗರದ ಪಾಳೆಗಾರರು, ಹೊಯ್ಸಳ, ಕೆಳದಿ ನಾಯಕರು ಮುಂತಾದ ರಾಜ ಮನೆತನದ ಆಳ್ವಿಕೆಯೊಂದಿಗೆ ಪೋರ್ಚುಗೀಸರ ನೆಲೆಯೂ ಇಲ್ಲಿತ್ತು. ರಾಜಾ ವಿಕ್ರಮಾದಿತ್ಯನ ಕಾಲಾನಂತರ ಅಳಿಯಕಟ್ಟಿನ ಪ್ರವರ್ತಕನಾದ ಭೂತಾಳಪಾಂಡ್ಯನು ಬಾರಕೂರು ಪ್ರಾಂತ್ಯದ ಆಳ್ವಿಕೆ-ಆಡಳಿತ ನಡೆಸಿ ಊರಿನ ಸರ್ವೋತೋಮುಖ ಅಭಿವೃದ್ಧಿಗೆ ಕಾರಣೀಕರ್ತನಾದನು ಎಂಬುದಾಗಿ ಈ ಊರಿನಲ್ಲಿ ಸಿಗುವ ಹಲವಾರು ಶಿಲಾಶಾಸನಗಳು ಸಾರುತ್ತವೆ. ಕೋಟೆ ಕೊತ್ತಲಗಳಿಂದ, ಶಿಲಾಸ್ತಂಭ, ಕಲ್ಲು ಚಪ್ಪರ, ಕೆರೆಗಳು, 365 ದೇವಾಲಯಗಳಲ್ಲಿ ಕೆಲವು ನಶಿಸಿ ಹೋಗಿದ್ದರೂ ಹಲವು ಜಾತಿಗಳ ಮೂಲ ದೇವಸ್ಥಾನಗಳ ಸೊಬಗನ್ನು ಇಲ್ಲಿ ಕಾಣಬಹುದು. ಒಮ್ಮೆ ಭೇಟಿ ನೀಡಲೇಬೇಕಾದ ಚಾರಿತ್ರಿಕ ಪ್ರವಾಸಿ ತಾಣ.
ಇಂಥಾ ಭವ್ಯ ಇತಿಹಾಸವಿರುವ ಬಾರಕೂರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ವಿಶಿಷ್ಟ ಛಾಪು ಮೂಡಿಸಿ, ಕೊಡುಗೆ ನೀಡುತ್ತಿರುವುದು ಕಳೆದ ಎರಡೂವರೆ ದಶಕಗಳ ಸಾಹಿತ್ಯ ವೈಭವ! ಬಾರಕೂರು ನೇಶನಲ್ ಪದವಿಪೂರ್ವ ಕಾಲೇಜಿನ ನಿವೃತ್ತ ಆಂಗ್ಲಭಾಷಾ ಉಪನ್ಯಾಸಕ, ಬರಹಗಾರ, ವಾಗ್ಮಿ, ಚಿಂತಕ, ಸಂಪನ್ಮೂಲ ವ್ಯಕ್ತಿ ಶ್ರೀಯುತ ಸಜಂಗದ್ದೆ ರಾಮ ಭಟ್ಟರ ಮೆದುಳಿನ ಕೂಸು (brain child) ಈ ಸ್ಟೂಡೆಂಟ್ ಲಿಟ್-ಫೆಸ್ಟ್! ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ ಬಿತ್ತುವುದು, ಅವರೊಳಗಿನ ಚಿಗುರುತ್ತಿರುವ ಕವಿ, ಸಾಹಿತಿ, ನಾಟಕಕಾರ, ಕಲಾವಿದ, ವಾಗ್ಮಿಯನ್ನು ಪೋಷಿಸಿ ನೀರೆರೆದು ಹೆಮ್ಮರವಾಗಿಸಿ, ಆ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಹಲವಾರು ಮೇರು ವ್ಯಕ್ತಿ-ವ್ಯಕ್ತಿತ್ವಗಳನ್ನು, ದೃಷ್ಟಾಲರನ್ನು ಕೊಡುವ ಮಹತ್ತರ ಕಾರ್ಯದ ಬುನಾದಿ ಕಳೆದ ಇಪ್ಪತ್ತೊಂದು ವರ್ಷಗಳಿಂದ ಈ ಮಕ್ಕಳ ಸಾಹಿತ್ಯ ಸಮ್ಮೇಳನದ ಮೂಲಕ ಆಗುತ್ತಿದೆ. ಎಳವೆಯಲ್ಲೇ ಈ ರೀತಿಯ ಅವಕಾಶ ಮತ್ತು ವೇದಿಕೆ ಉಡುಪಿ ಜಿಲ್ಲೆಯ ಪ್ರೌಢಶಾಲಾ ಮಕ್ಕಳಿಗೆ ಸಿಗುತ್ತಿರುವುದು ಗಮನಾರ್ಹ, ಅರ್ಥಪೂರ್ಣ ವಿಚಾರ. 'ಇಂದಿನ ಮಕ್ಕಳೇ ಮುಂದಿನ ಜನಾಂಗ' ನಾಣ್ನುಡಿಯ ವಿಸ್ತೃತ ರೂಪವೇ 'ಇಂದಿನ ಮಕ್ಕಳೇ ಮುಂದಿನ ಸಾಹಿತಿಗಳು'. ಇದು ಈ ಸಾಹಿತ್ಯ ಸಮ್ಮೇಳನದ ತಾತ್ಪರ್ಯ ಮತ್ತು ಸದಾಶಯ!
ಯುವ ಮನಸ್ಸು, ಹೃದಯ ಮತ್ತು ಬುದ್ಧಿವಂತಿಕೆಯಲ್ಲಿ ಸಾಹಿತ್ತಿಕ ಉನ್ನತಿ ಮತ್ತು ಶ್ರೇಷ್ಠತೆಯನ್ನು ಬಿತ್ತಿ, ಪೋಷಿಸಿ, ಬೆಳೆಸುವ ನಿರಂತರ ವೈಚಾರಿಕ ಸಂಪ್ರದಾಯದ ಭಾಗವಾಗಿ ಇಪ್ಪತ್ತೊಂದನೆಯ ವರ್ಷದ ಸಾಹಿತ್ಯ ಉತ್ಸವವಾದ 'ಮಕ್ಕಳ ಸಾಹಿತ್ಯ ಸಮ್ಮೇಳನ'ವು ಉಡುಪಿ ಜಿಲ್ಲೆಯ ಸಾಂಸ್ಕೃತಿಕ ವೈಭೋಗ ಮತ್ತು ವೈಭವವನ್ನು ಈ ಬಾರಿ ಮತ್ತಷ್ಟು ಪ್ರಖರವಾಗಿ ಬೆಳಗಿಸಲು ಸಜ್ಜಾಗಿದೆ. ಈ ಪ್ರತಿಷ್ಠಿತ ಒಂದು ದಿನದ 'ಮಕ್ಕಳ ಸಾಹಿತ್ಯ ಹಬ್ಬ'ವು ಶನಿವಾರ, 04-01-2025ರಂದು ಬಾರಕೂರಿನ ಹನೆಹಳ್ಳಿಯ ಸಂಕಮ್ಮತಾಯಿ ರೆಸಾರ್ಟ್ಸ್ ಪರಿಸರದಲ್ಲಿ ಆಯೋಜನೆಗೊಂಡಿದೆ. ಧರ್ಮಸ್ಥಳದ ಶಾಂತಿವನ ಟ್ರಸ್ಟ್ (ರಿ.), ಉಡುಪಿ ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಬೆಳಗಾವಿಯ ಶ್ರೀ ರಾಮಕೃಷ್ಣ ಮಿಷನ್, barkuronline.com , ಬಾರಕೂರಿನ ಸ್ವಾಮಿ ವಿವೇಕಾನಂದ ಮತ್ತು ಸ್ವಾಮಿ ಪುರುಷೋತ್ತಮಾನಂದಜೀ ಚಾರಿಟೇಬಲ್ ಟ್ರಸ್ಟ್ (ರಿ.), ಬಾರಕೂರು ರೋಟರಿ ಕ್ಲಬ್ ಈ ಬಾರಿಯ ಮಕ್ಕಳ ಸಾಹಿತ್ಯ ಸಮ್ಮೇಳನಕ್ಕೆ ಸಹಯೋಗ ನೀಡುತ್ತಿರುವ ಮತ್ತು ಸಾರಥ್ಯ ವಹಿಸುತ್ತಿರುವ ಸಂಘ ಸಂಸ್ಥೆಗಳು.
ಒಂದು ಅನನ್ಯ ಉಪಕ್ರಮವಾಗಿ ಆರಂಭವಾದ ಈ ಮಕ್ಕಳ ಸಾಹಿತ್ಯ ಸಮ್ಮೇಳನವು ಇಂದು ಉಡುಪಿ ಪರಿಸರದ ಮತ್ತು ಕರ್ನಾಟಕ ರಾಜ್ಯದ ಅತ್ಯಂತ ನಿರೀಕ್ಷಿತ ಮತ್ತು ಪ್ರಸಿದ್ಧ ಸಾಹಿತ್ಯ ಕೂಟಗಳಲ್ಲಿ ಒಂದಾಗಿ ಅರಳಿ ನಿಂತಿದೆ! ಯುವ ಸಾಹಿತ್ಯ ಪ್ರತಿಭೆಗಳನ್ನು ಗುರುತಿಸಿ ಪೋಷಿಸಲು ಮತ್ತು ಕನ್ನಡ ಸಾಹಿತ್ಯದ ಶ್ರೀಮಂತ ಮತ್ತು ವಿಶಾಲ ಸಂಪ್ರದಾಯವನ್ನು ಆಚರಿಸಿ ಆನಂದಿಸಲು ಇದೊಂದು ಪ್ರಮುಖ ವೇದಿಕೆಯಾಗಿದೆ. ಪ್ರತೀ ವರ್ಷದಂತೆ ಉಡುಪಿ ಜಿಲ್ಲೆಯ ವಿವಿಧ ಪ್ರೌಢಶಾಲೆಗಳ ಸುಮಾರು 350 ಸಾಹಿತ್ಯಾಸಕ್ತ ಆಯ್ದ ವಿದ್ಯಾರ್ಥಿಗಳು ಈ ಸಾಹಿತ್ಯ ಸಂತೆಯಲ್ಲಿ ಸಕ್ರಿಯವಾಗಿ ಭಾಗಿಯಾಗುತ್ತಿದ್ದಾರೆ.
ಉದ್ಘಾಟನ ಸಮಾರಂಭ, ಮಕ್ಕಳ ಕವಿಗೋಷ್ಠಿ, ಮಕ್ಕಳ ಸ್ವರಚಿತ ಕವನಗಳ ಸಂಕಲನ ಬಿಡುಗಡೆ, ಎರಡು ವಿಚಾರ ಗೋಷ್ಠಿಗಳು, ಅತಿಥಿ ಸಾಹಿತಿಗಳೊಂದಿಗೆ ಮಕ್ಕಳ ಸಂವಾದ, ಸಮಾರೋಪ ಸಮಾರಂಭ ಇವಿಷ್ಟು ಕಾರ್ಯಕ್ರಮಗಳು ಅಂದು ನಡೆಯಲಿವೆ. ಹೆಸರಾಂತ ರಂಗನಟ ಮತ್ತು ರಂಗನಿರ್ದೇಶಕ ಶ್ರೀ ಎಸ್. ಎನ್. ಸೇತುರಾಂ ಈ ಬಾರಿಯ ಸಾಹಿತ್ಯ ಸಂಭ್ರಮವನ್ನು ಉದ್ಘಾಟಿಸಿ ಮಕ್ಕಳೊಂದಿಗೆ ಬೆರೆತು ನಗುವಾಗಲಿದ್ದಾರೆ-ಮಗುವಾಗಲಿದ್ದಾರೆ! ಸಾಹಿತ್ಯದ ಶ್ರೇಷ್ಠ ಸದಭಿರುಚಿಯೊಂದಿಗೆ ಸಮಯ ಪ್ರಜ್ಞೆ-ಪಾಲನೆ, ಸಂಯಮದ ವರ್ತನೆ, ಶಿಸ್ತು-ಅಚ್ಚುಕಟ್ಟುತನ ಈ ಕಾರ್ಯಕ್ರಮದ ಹೆಗ್ಗಳಿಕೆ ಮತ್ತು all time trademark!
'ಕಳೆದ ಇಪ್ಪತ್ತು ವರ್ಷಗಳಿಂದ ಈ ಮಕ್ಕಳ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗಿಯಾದ ಹಲವಾರು ವಿದ್ಯಾರ್ಥಿಗಳು ಈಗ ಪ್ರಬುದ್ಧ ಲೇಖಕರಾಗಿದ್ದಾರೆ, ಒಳ್ಳೆಯ ಕವಿಗಳಾಗಿದ್ದಾರೆ, ಉತ್ತಮ ರಂಗ ಕಲಾವಿದರಾಗಿದ್ದಾರೆ, ಸಾಹಿತಿಗಳೂ ಆಗಿ ಕನ್ನಡ ಸಾರಸ್ವತ ಲೋಕಕ್ಕೆ ತಮ್ಮದೇ ಕೊಡುಗೆಯನ್ನು ನೀಡುತ್ತಿದ್ದಾರೆ. ಅವರೆಲ್ಲರೂ ನಮ್ಮ ಸಮ್ಮೇಳನಗಳ ಹಿಂದಿನ ವರ್ಷಗಳ ಶಿಬಿರಾರ್ಥಿಗಳು ಮತ್ತು ಈ ಮಕ್ಕಳ ಸಾಹಿತ್ಯ ಸಮ್ಮೇಳನವು ಅವರ ಸಾಹಿತ್ಯ ಕ್ಷೇತ್ರದ ಕೃಷಿ ಮತ್ತು ಅಭಿವೃದ್ಧಿಯ ಅಡಿಪಾಯ ಎನ್ನುವುದನ್ನು ಅವರು ಉಲ್ಲೇಖಿಸುವಾಗ, ಸ್ಮರಿಸುವಾಗ ನಮಗೆ ಸಿಗುವ ಸಾತತ್ಯ, ನೆಮ್ಮದಿ ಅನನ್ಯ. ನಮ್ಮ ನಡುವೆ ಅನೇಕ ಸಾಹಿತ್ಯಾಸಕ್ತ ಬುದ್ಧಿವಂತ ಮತ್ತು ಪ್ರತಿಭಾನ್ವಿತ ಮಕ್ಕಳು ಇದ್ದಾರೆ. ಅಂಥವರಿಗೆ ಸರಿಯಾದ ಮಾರ್ಗದರ್ಶನ, ವೇದಿಕೆ ಮತ್ತು ಸಾಹಿತ್ಯದ ಪಯಣದ ದಾರಿದೀಪವಾಗಿ ಕೆಲಸ ಮಾಡುತ್ತಿರುವುದು ನಮ್ಮ ಸೌಭಾಗ್ಯ. ಈ ಸಾಹಿತ್ಯ ಕೃಷಿ ನಮ್ಮೂರು ಬಾರಕೂರಿಗೆ ಬೆಲೆಕಟ್ಟಲಾಗದ ಸದ್ಭಾವನೆ (priceless goodwill) ತಂದು ಕೊಟ್ಟಿರುವುದು ಈ ಕಾರ್ಯಕ್ರಮದ ನಿಜಾರ್ಥದ ಯಶಸ್ಸು ಮತ್ತು ಪರಿಪೂರ್ಣತೆ. ನಾನು ನೆಪ ಮಾತ್ರ! ಈ ನಿರಂತರ ಸಾಫಲ್ಯ ಮತ್ತು ಉತ್ಕೃಷ್ಟ ಗುಣಮಟ್ಟದ ಕಾರ್ಯಕ್ರಮದ ಹಿಂದೆ ಸಾಕಷ್ಟು ಶ್ರಮ ವಹಿಸುವ, ತನು-ಮನ-ಧನ ಕೊಡುಗೆ ನೀಡುವ ದೊಡ್ಡ ತಂಡವಿದೆ. ನಮ್ಮೆಲ್ಲರ ಸಾಂಘಿಕ ಪ್ರಯತ್ನದ ಫಲವೇ ಈ ಇಪ್ಪತ್ತೊಂದು ವರ್ಷಗಳ ಸಾಹಿತ್ಯದ ಅಳಿಲು ಸೇವೆ. ಧನ್ಯೋಸ್ಮಿ' ಎನ್ನುವಾಗ ಸದಾ ನಗುಮೊಗ ಬೀರುವ ಪ್ರಧಾನ ಸಂಘಟಕ ರಾಮ ಭಟ್ಟರ ಕಂಗಳಲ್ಲಿ ಸಾಹಿತ್ಯದ ಅವಿಚ್ಛಿನ್ನ ಕಾಂತಿ-ಹೊಳಪು! ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಕನ್ನಡದ ನಂದಾದೀಪ ಬೆಳಗುವ ಇಂಥಾ ಸಾಹಿತ್ಯ ಸೇವಕರ, ಪೋಷಕರ ಮತ್ತು ಸಂಘ-ಸಂಸ್ಥೆಗಳ ಸಂಖ್ಯೆ ನೂರ್ಮಡಿಯಾಗಲಿ.
ಬನ್ನಿ! ಈ ಚಿಣ್ಣರ ಅಮೋಘ ಸಾಹಿತ್ಯ ಜಾತ್ರೆಯಲ್ಲಿ ಪಾಲ್ಗೊಂಡು ಸಾಹಿತ್ಯ ಕ್ಷೇತ್ರದ ಭವಿಷ್ಯದ ಧುರೀಣರನ್ನು ಹುರಿದುಂಬಿಸೋಣ. ಇಂಥಾ ಕನ್ನಡ ಸಾಹಿತ್ಯ ಸೇವೆಗಳನ್ನು ನೋಡಿದಾಗ ಕನ್ನಡ ಮತ್ತು ಕನ್ನಡ ಸಾಹಿತ್ಯದ ನಾಳೆಗಳು ಇನ್ನಷ್ಟು ವಿಶಿಷ್ಟವಾಗಿರಲಿವೆ, ಸಮೃದ್ಧವಾಗಿರಲಿವೆ ಎನ್ನುವುದು ನಿಸ್ಸಂಶಯ. ಮುಂದಿನ ಪೀಳಿಗೆಯ ಕೈಯಲ್ಲಿ ಕನ್ನಡ ಮತ್ತು ಕನ್ನಡ ಸಾಹಿತ್ಯ ಸುರಕ್ಷಿತವಾಗಿರಲಿದೆ. ಒಟ್ಟಾರೆಯಾಗಿ ಇಂಥಾ ಸಾಹಿತ್ಯ ಸೇವೆಗಳಿಂದ ಕನ್ನಡ ಸಾರಸ್ವತ ಲೋಕದಲ್ಲಿ ಖಂಡಿತವಾಗಿಯೂ 'ಭರವಸೆಯ ನಾಳೆಗಳು ನಮದೆನಿಸಿವೆ'. ಚೈತನ್ಯ ಪರಮಹಂಸ ವಿವೇಕರ ಭಾರತ ಜನನಿಯ ತನುಜಾತೆ. ಜಯ ಹೇ ಕರ್ನಾಟಕ ಮಾತೆ!
ರವೀ ಸಜಂಗದ್ದೆಲೇಖಕರು ಸಾಫ್ಟ್'ವೇರ್ ಉದ್ಯೋಗಿ