ಕುಂದಾಪುರ, ಡಿ.31 (DaijiworldNews/AK):ಜನವರಿ ಬಂದರೂ ರೈತರ ಬಹು ನಿರೀಕ್ಷಿತ ವಾರಾಹಿ ನೀರಾವರಿ ಯೋಜನೆಯ ಕಾಲುವೆಯಲ್ಲಿ ಇನ್ನೂ ನೀರು ಬಿಡಲಿಲ್ಲ. ಈಗಾಗಲೇ ಹಿಂಗಾರು ಭತ್ತ ಬೇಸಾಯ ಪ್ರಕ್ರಿಯೆ ಆರಂಭಿಸಿದ ರೈತರು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ವಾರಾಹಿ ನೀರಾವರಿ ನಿಗಮದವರು ತಾವು ನಡೆದದ್ದೇ ದಾರಿ ಎನ್ನುವ ಹಠದಲ್ಲಿರುವಂತೆ ಕಾಣುತ್ತಿದೆ.

ಈ ಹಿಂದೆಯೇ ಉಡುಪಿ ಜಿಲ್ಲಾ ರೈತ ಸಂಘದವರು ಡಿಸೆಂಬರ್ ಪ್ರಾರಂಭದಿಂದಲೇ ಕಾಲುವೆಯಲ್ಲಿ ನೀರು ಹರಿಸುವಂತೆ ಮನವಿ ಮಾಡಿದ್ದರು. ಆದರೆ ಪ್ರತೀ ವರ್ಷವೂ ಕೂಡಾ ವಾರಾಹಿ ನೀರಾವರಿ ನಿಗಮ ಜನವರಿ ಒಳಗೆ ನೀರು ಹರಿಸುವುದೇ ಇಲ್ಲ. ಈ ಬಾರಿಯೂ ಹಾಗೆಯೇ ಆಗಿದೆ. ವಾರಾಹಿ ನೀರು ನಂಬಿಕೊಂಡು ಕಾಲುವೆಯ ಅಚ್ಚುಕಟ್ಟಿನ ಹಿಂಗಾರು ಹಂಗಾಮಿಯ ಭತ್ತ ಬೇಸಾಯ, ತರಕಾರಿ ಕೃಷಿಗೆ ಮುಂದಾಗಿದ್ದರು.
ನವಂಬರ್ ಅಂತ್ಯಕ್ಕೆ ಉಡುಪಿ ಜಿಲ್ಲೆಯ ಕೃಷಿತಾಕುಗಳಿಗೆ ನೀರು ಬೇಕಾಗುತ್ತದೆ. ಕೊನೆಯಲ್ಲಿ ಹೇಗೂ ನೀರು ಇರುವುದಿಲ್ಲ. ನವೆಂಬರ್ ಅಂತ್ಯ ಅಥವಾ ಡಿಸೆಂಬರ್ ಪ್ರಾರಂಭದಲ್ಲಿ ನೀರು ಬಿಟ್ಟರೆ ರೈತರಿಗೆ ಹೆಚ್ಚು ಅನುಕೂಲವಾಗುತ್ತದೆ. ಆದರೆ ಈ ಬಾರಿ ಇನ್ನೂ ಕಾಲುವೆ ನಿರ್ವಹಣೆ ಮಾಡುವ ಕೆಲಸವೇ ಸರಿಯಾಗಿ ನೆಡೆದಿಲ್ಲ. ಇಲಾಖೆಯ ಬೇಜಬ್ದಾರಿಯಿಂದ ಇನ್ನೂ ಕೂಡಾ ನೀರು ಬಿಡುವ ಪೂರ್ವದಲ್ಲಿ ಮಾಡುವ ಕಾಲುವೆಯ ನಿರ್ವಹಣೆ, ಗೇಟ್ ವಾಲ್ ಗಳ ಗುಣಮಟ್ಟ ಪರೀಕ್ಷೆ, ಇತ್ಯಾದಿ ಅಗತ್ಯ ಕೆಲಸಗಳು ಇನ್ನೂ ಬಾಕಿ ಇದೆ ಎನ್ನುತ್ತಾರೆ ರೈತರು.
ಪ್ರತೀ ವರ್ಷ ಡಿಸೆಂಬರ್ ತಿಂಗಳಲ್ಲಿ ರೈತರು ಆಗ್ರಹ, ಮನವಿ ಕೊಟ್ಟ ಮೇಲೆಯೇ ನೀರು ಬಿಡುವುದು. ರೈತ ಸಂಘದವರು ಧ್ವನಿ ಎತ್ತಿದ ಬಳಿಕವೇ ವಾರಾಹಿ ಅಧಿಕಾರಿಗಳು ಎಚ್ಚೆತ್ತುಕೊಳ್ಳುವುದು ಸ್ವಾಭಾವಿಕವಾಗಿ ಹೋಗಿದೆ. ಅಲ್ಲಿಯ ವರೆಗೆ ವಾರಾಹಿ ಇಲಾಖೆಗೆ ಕಾಲಕ್ಕೆ ಸರಿಯಾಗಿ ನೀರು ಬಿಡಬೇಕು, ಅದಕ್ಕೆ ಸೂಕ್ತ ತಯಾರಿ ಮಾಡಿಕೊಳ್ಳಬೇಕು ಎನ್ನುವ ಕನಿಷ್ಠ ಜವಬ್ದಾರಿಯೂ ಇರುವುದಿಲ್ಲ.
ವಾರಾಹಿ ನೀರಾವರಿ ಯೋಜನೆಯ ಮೂಲ ಉದ್ದೇಶವೇ ಕೃಷಿ. ಆದರೆ ಇವತ್ತು ರಾಜಕೀಯ ಪ್ರೇರಿತವಾಗಿ ವಾರಾಹಿ ನೀರು ಮೂಲ ಉದ್ದೇಶವೇ ಬದಲಾಗುವ ಸಾಧ್ಯತೆಗಳು ದಟ್ಟವಾಗಿವೆ. ವಾರಾಹಿ ನೀರಾವರಿ ಯೋಜನೆ ಕುಡಿಯುವ ನೀರು ಯೋಜನೆಯಾಗಿ ಮಾರ್ಪಟುಗೊಂಡರೂ ಅಚ್ಛರಿ ಇಲ್ಲ. ಬೇರೆ ತಾಲೂಕುಗಳಿಗೆ ನೀರು ಬಿಡಲು ಆಸಕ್ತಿ ತಾಳುವ ಇಲಾಖೆ ಮೂಲ ಯೋಜನೆಯಲ್ಲಿ ಇರುವ ಕೃಷಿ ಭೂಮಿಗೆ ನೀರು ಬಿಡಲು ಮೀನ ಮೇಷ ಎಣಿಸುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಕೊನೆಗೂ ವಾರಾಹಿ ನೀರಾವರಿ ಯೋಜನೆ ಉದ್ಘಾಟನೆಯಾದ ಬಳಿಕ ಕಾಲುವೆಯಲ್ಲಿ ನೀರು ಬಂತು ಎನ್ನುವ ಸಂಭ್ರಮ ಒಂದೇಡೆಯಾದರೆ ಮರುವರ್ಷದಿಂದ ರೈತರು ಸ್ಪಲ್ಪ ಕೃಷಿಗೆ ಜಾಸ್ತಿ ಒತ್ತು ಕೊಟ್ಟಿದ್ದರು. ದ್ವಿದಳ ಧಾನ್ಯ, ಸುಗ್ಗಿ ಇತ್ಯಾದಿಗಳನ್ನು ಆರಂಭಿಸಿದರು. ವಾರಾಹಿ ನೀರನ್ನು ನಂಬಿಕೊಂಡು ಹೊಸದಾಗಿ ಕೃಷಿ ಆರಂಭಿಸಿದವರು ಮೊದಲ ಹಂತದಲ್ಲಿಯೇ ನಿರಾಸರಾದರು. ರೈತರ ಅಗತ್ಯತೆಗೆ ತಕ್ಕಂತೆ ನೀರು ಪ್ರಾರಂಭದಲ್ಲಿ ಸಿಗಲೇ ಇಲ್ಲ.
ಕರ್ನಾಟಕದ ಪ್ರತಿಷ್ಠಿತ ನೀರಾವರಿ ಯೋಜನೆಯಾದ ವಾರಾಹಿ ಯೋಜನೆಯ ಕಾಲುವೆಯಲ್ಲಿ ನೀರು ಹರಿಯಲಾರಂಭಿಸಿದ ಬಳಿಕ ಒಂದು ವರ್ಷವೂ ನಿಗಧಿತ ಸಮಯಕ್ಕೆ ನೀರು ಬಿಟ್ಟ ಉದಾಹರಣೆಗಳಿಲ್ಲ. ಕಾರಣ ಸಮಾಜಾಯಿಷಿಗಳನ್ನು ನೀರಾವರಿ ನಿಗಮ ನೀಡುತ್ತದೆ. ಕಾಲುವೆ ದುರಸ್ತಿ ಕೆಲಸ ಬಾಕಿ ಇದೆ. ಇತ್ಯಾದಿ ತಾಂತ್ರಿಕ ಕಾರಣಗಳನ್ನು ನೀಡುತ್ತಾರೆ.
ಉಡುಪಿ ಜಿಲ್ಲೆಯ ಕುಂದಾಪುರ ಹಾಗೂ ಬ್ರಹ್ಮಾವರ ತಾಲೂಕಿಗೆ ನವಂಬರ್ ಅಂತ್ಯ ಹಾಗೂ ಡಿಸೆಂಬರ್ ಆರಂಭದಿಂದಲೇ ಕೃಷಿಗೆ ನೀರಿನ ಅಲಭ್ಯತೆ ಕಾಡುತ್ತದೆ. ಈ ಸಮಯದಲ್ಲಿ ನೀರಿನ ವ್ಯವಸ್ಥೆ ಬೇಕಾಗುತ್ತದೆ. ಹಿಂಗಾರು ಹಂಗಾಮಿಗೆ ಈ ಸಮಯದಲ್ಲಿ ನೀರು ಬೇಕಾಗುತ್ತದೆ. ಗದ್ದೆಯಲ್ಲಿ ನೀರು ನಿಲ್ಲಿಸಿ ಹದ ಮಾಡುವ ಕ್ರಮವೂ ಕೂಡಾ ಇದೆ. ಅಲ್ಲದೇ ತರಕಾರಿ ಇತ್ಯಾದಿ ಬೆಳೆಗಳನ್ನು ಈ ಸಮಯದಲ್ಲಿ ನಾಟಿ ಮಾಡುತ್ತಾರೆ. ಡಿಸೆಂಬರ್ ಪ್ರಾರಂಭದಿಂದಲೇ ನೀರು ಬೇಕಾಗುತ್ತದೆ. ಜನವರಿ ಬಳಿಕ ನೀರು ಕೊಟ್ಟರೆ ಪ್ರಯೋಜನ ಹೆಚ್ಚಿನ ರೈತರಿಗೆ ಇರುವುದಿಲ್ಲ. ಕೆಲವೊಂದು ಬೆಳೆಗಳನ್ನು ಇಂಥಹ ಸಮಯದಲ್ಲಿ ಹಾಕಿದರೆ ಉತ್ತಮ ಬೆಲೆ ಸಿಗುತ್ತದೆ ಎನ್ನುವ ಖಚಿತ ಲೆಕ್ಕಚಾರ ಕೂಡಾ ರೈತರಲ್ಲಿ ಇರುತ್ತದೆ. ಹಾಗಾಗಿ ಅವರು ನಿದಿಷ್ಟ ಸಮಯಕ್ಕೆ ಹಿಂಗಾರು ಹಂಗಾಮಿನ ಕೃಷಿ ಆರಂಭಿಸುತ್ತಾರೆ. ಮುಂಗಾರು ಕಟಾವು ಆದ ಬಳಿಕವೇ ಹಿಂಗಾರು ಕೃಷಿ ಚಟುವಟಿಕೆ ಆರಂಭವಾಗುತ್ತದೆ.
ವಾರಾಹಿ ನೀರನ್ನು ಡಿಸೆಂಬರ್ ಪ್ರಾರಂಭದಲ್ಲಿಯೇ ಬಿಟ್ಟರೆ ಅನುಕೂಲ. ಈ ಬಗ್ಗೆ ಸರ್ಕಾರ ನಿರ್ದಿಷ್ಟ ಆದೇಶವನ್ನೇ ವಾರಾಹಿ ನೀರಾವರಿ ನಿಗಮಕ್ಕೆ ಮಾಡಬೇಕಿದೆ. ಸರ್ಕಾರ, ಚುನಾಯಿತ ಪ್ರತಿನಿಧಿಗಳು ರೈತರ ಪರವಾಗಿ ಮಾತನಾಡುತ್ತಿಲ್ಲ. ವಾರಾಹಿ ಅಧಿಕಾರಿಗಳು ಮಾಡಿದ್ದೇ ಸರಿ ಎನ್ನುವ ದಾಟಿಗೆ ಸರಕಾರ ಬಂದಿದೆ. ಯಾರದ್ದೋ ಮುಲಾಜಿಗೆ ಒಳಗಾದಂತೆ ವರ್ತಿಸುತ್ತವೆ. ಹಾಗಾಗಿ ಇಲಾಖೆಗಳು ತಮ್ಮ ಅಲಸ್ಯ ನೀತಿಯನ್ನು ಮುಂದುವರಿಸುತ್ತಲೇ ಬಂದಿದೆ.