ಉಡುಪಿ,ಜ.01(DaijiworldNews/TA): ಮಕ್ಕಳ ಛಾಯಾ ಚಿತ್ರೀಕರಣ ಛಾಯಾಗ್ರಾಹಕನಿಗೆ ಸವಾಲಾಗಿದೆ. ಬಹಳ ಕಠಿಣವಾದ ಕೆಲಸವೆಂದರೆ ಮಕ್ಕಳ ಛಾಯಾ ಚಿತ್ರೀಕರಣ. ಛಾಯಾಗ್ರಹಕ ಮಕ್ಕಳೊಂದಿಗೆ ಮಗುವಿನಂತೆ ವರ್ತಿಸಿದಾಗ ಮಾತ್ರ ಒಂದು ಉತ್ತಮ ಛಾಯಾಚಿತ್ರ ತೆಗೆಯಲು ಸಾಧ್ಯ ಎಂದು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದಕ್ಷಿಣ ಕನ್ನಡ-ಉಡುಪಿ ಜಿಲ್ಲಾಧ್ಯಕ್ಷ, ಪದ್ಮಪ್ರಸಾದ್ ಜೈನ್ ಅಭಿಪ್ರಾಯಪಟ್ಟರು.






ಅವರು ಡಿ. 31ರಂದು ಉಡುಪಿಯ ಜಗನ್ನಾಥ ಸಭಾಭವನದಲ್ಲಿ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಉಡುಪಿ ವಲಯ ಹಾಗೂ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಆಯೋಜಿಸಿದ ಮಕ್ಕಳ ಛಾಯಾಚಿತ್ರ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸುದೀರ್ ಎಂ ಶೆಟ್ಟಿ ವಹಿಸಿ ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ಎಸ್ ಕೆ ಪಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಕೆ. ವಾಸುದೇವ ರಾವ್, ಜಿಲ್ಲಾ ಉಪಾಧ್ಯಕ್ಷ ಪ್ರವೀಣ್ ಕೊರೆಯ, ವಲಯದ ಗೌರವಾಧ್ಯಕ್ಷ ನವೀನ್ ಚಂದ್ರ ಬಳ್ಳಾಲ್, ಉಪಾಧ್ಯಕ್ಷ ಸಂದೀಪ್ ಕಾಮತ್, ವಲಯದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಮಕ್ಕಳ ಛಾಯಾಚಿತ್ರ ಸ್ಪರ್ಧೆಯ ಪ್ರಥಮ ಬಹುಮಾನ ಬಿ. ಜಯೇಶ್ ಶೆಣೈ ಕಾರ್ಕಳ, ದ್ವಿತೀಯ ಪ್ರಣವ್ ಜೆ, ತೃತೀಯ ಶಿಖಾ ಸಿ. ಶೆಟ್ಟಿ ಮಂಗಳೂರು ಪಡೆದರು. ಸಮಾಧಾನಕರ ಬಹುಮಾನವನ್ನು ವಮಿಕಾ ಪಿ. ಉಡುಪಿ, ಅಯಾನ್ಶ್ ನಾಯಕ್ ಕಾರ್ಕಳ, ಆನ್ಯ ಜೈನ್ ಕಾರ್ಕಳ, ಶ್ರೀನಿಕ ಆರ್. ಆಚಾರ್ಯ ಉಡುಪಿ ಹಾಗೂ ವಿಯನ್ನ ಲಿಯೋರ ಕಾರ್ಲೊ ಮಂಗಳೂರು ಪಡೆದುಕೊಂಡರು. ಖಾಸಗಿ ವಾಹಿನಿಯ ನಿರೂಪಕ ಚೇತನ್ ಶೆಟ್ಟಿ ಬಹುಮಾನ ವಿಜೇತ ಪುಟಾಣಿಗಳ ಪೋಷಕರ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.