ಮಂಗಳೂರು, ಜ.01 (DaijiworldNews/AA): ಭೀಕರ ರಸ್ತೆ ಅಪಘಾತದಲ್ಲಿ ಕಾಲೇಜು ವಿದ್ಯಾರ್ಥಿ, ಯುವ ಯಕ್ಷಗಾನ ಕಲಾವಿದರೊಬ್ಬರು ಮೃತಪಟ್ಟ ಘಟನೆ ನಗರ ಹೊರವಲಯದ ಅರ್ಕುಳ ಜಂಕ್ಷನ್ ಬಳಿ ಡಿ. 31ರ ಸಂಜೆ ಸಂಭವಿಸಿದೆ.


ವಿಟ್ಲ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ವರ್ಷದ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಯಾಗಿದ್ದು, ಸಸಿಹಿತ್ಲು ಭಗವತೀ ಯಕ್ಷಗಾನ ಮೇಳದ ಕಲಾವಿದ ಪ್ರವೀತ್ ಕುಮಾರ್ (22) ಮೃತ ದುರ್ದೈವಿ.
ಮೇಳದಲ್ಲಿ ಸ್ತ್ರೀವೇಷಧಾರಿಯಾಗಿದ್ದ ಪ್ರವೀತ್ ಅವರು ಡಿ. 31ರಂದು ಬಜಪೆ ಕಂದಾವರ ಬೈಲಿನಲ್ಲಿ ನಿಗದಿಯಾಗಿದ್ದ ಮೇಳದ ಯಕ್ಷಗಾನಕ್ಕೆ ತೆರಳುತ್ತಿದ್ದರು. ಈ ವೇಳೆ ಅರ್ಕುಳ ಜಂಕ್ಷನ್ ಬಳಿ ಬೈಕ್ ಸ್ಕಿಡ್ ಆಗಿ ರಸ್ತೆಗೆ ಬಿದ್ದಿದ್ದಾರೆ. ರಸ್ತೆಗೆ ಬಿದ್ದ ವೇಳೆ ಐಸ್ಕ್ರೀಂ ಸಾಗಿಸುತ್ತಿದ್ದ ವಾಹನ ಪ್ರವೀತ್ ಮೇಲೆ ಹರಿದಿದೆ. ಇದರ ಪರಿಣಾಮ ಪ್ರವೀತ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಈ ಬಗ್ಗೆ ಮಂಗಳೂರು ನಗರ ಸಂಚಾರ ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.