ಉಡುಪಿ, ಜ.01 (DaijiworldNews/AA): ಉಡುಪಿ ತಾಲೂಕು (ವಾರ್ಡ್ 23) ವ್ಯಾಪ್ತಿಗೆ ಬರುವ ಬೈರಂಪಳ್ಳಿ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಸಿಬ್ಬಂದಿ ಇಲ್ಲದ ಕಾರಣ ಬೀಗ ಹಾಕಲಾಗಿದೆ.


ಡಿ.19ರಂದು ಗ್ರಾಮ ಪಂಚಾಯಿತಿ ಸಿಬ್ಬಂದಿ, ಕಚೇರಿಯಲ್ಲಿನ ಕೆಲಸದ ಹೊರೆಯಿಂದ ಮಾನಸಿಕ ಒತ್ತಡ ಹಾಗೂ ಆರೋಗ್ಯ ಸಮಸ್ಯೆಯಿಂದ ರಾಜೀನಾಮೆ ನೀಡುತ್ತಿರುವುದಾಗಿ ಪತ್ರ ಸಲ್ಲಿಸಿದ್ದರು. ಈ ಬಗ್ಗೆ ಪಂಚಾಯಿತಿ ಅಧ್ಯಕ್ಷರು ಉನ್ನತ ಅಧಿಕಾರಿಗಳಿಗೆ ಅಧಿಕೃತ ಸಂವಹನದ ಮೂಲಕ ತಿಳಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಸಿಬ್ಬಂದಿ ಇಂದು ಪಂಚಾಯಿತಿ ಕಚೇರಿಗೆ ಹಾಜರಾಗಲಿಲ್ಲ.
ಸಿಬ್ಬಂದಿ ರಾಜೀನಾಮೆ ನೀಡಿದ ವಿಷಯ ತಿಳಿಯದೆ ಪಂಚಾಯಿತಿ ಕಚೇರಿಗೆ ಕೆಲಸ ನಿಮಿತ್ತ ಬಂದ ಸಾರ್ವಜನಿಕರು ಬಾಗಿಲಿಗೆ ಬೀಗ ಹಾಕಿರುವುದನ್ನು ಕಂಡು ಹಾಗೇ ವಾಪಸ್ಸಾಗಬೇಕಾಯಿತು. ಸಂಪರ್ಕ ಕೊರತೆ ಹಾಗೂ ಮಾಹಿತಿ ನೀಡದೆ ಕಚೇರಿ ಮುಚ್ಚಿರುವುದಕ್ಕೆ ಪಂಚಾಯಿತಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಈ ಘಟನೆಯ ವಿಡಿಯೋವನ್ನು ಅನೇಕ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು ವೈರಲ್ ಆಗಿದೆ.