ಕಾರ್ಕಳ, ಜ.01 (DaijiworldNews/AK) :ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ವೇಳೆ ಕೆಲಸಗಾರರ ಜೊತೆ ಜಗಳ ಮಾಡಿದ್ದಲ್ಲದೆ ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇರ್ವತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಭರತ್ ಜೈನ್ ಆತನ ಸಹೋದರ ಭವಿಷತ್ ಜೈನ್ ಸಹಿತ ಹತ್ತು ಮಂದಿ ಆರೋಪಿಗಳ ವಿರುದ್ಧ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯಲ್ಲಿ ಹಲ್ಲೆಗೊಳಗಾದವರು ತಾಲೂಕು ಸಾರ್ವಜನಿಕ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಘಟನೆಯ ವಿವರ:
ಡಿ.30 ರಂದು ಈ ಘಟನೆ ನಡೆದಿರುತ್ತದೆ. ಪರಿಶಿಷ್ಟ ಜಾತಿಗೆ ಸೇರಿದ ವಿಠಲ ಎಂಬವರು ಸುದರ್ಶನ್, ಜಯ ಮತ್ತು ರೋಹಿತ್ ರೊಂದಿಗೆ ಇರ್ವತ್ತೂರು ಗ್ರಾಮ ಪಂಚಾಯತ್ ಕಟ್ಟಡದ ಪಕ್ಕದಲ್ಲಿರುವ ಕಟ್ಟಡದ ಕಾಂಕ್ರಿಟ್ ಕೆಲಸ ಮಾಡುತ್ತಿದ್ದರು.
ಅದೇ ವೇಳೆಗೆ ಅಲ್ಲಿಗೆ ಬಂದಿದ್ದ ಇರ್ವತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಭರತ್ ಜೈನ್ ಮತ್ತು ರೋಹಿತ್ ಮಧ್ಯೆ ಜಗಳ ನಡೆದಿತ್ತು. ಜಗಳ ಬಿಡಿಸಲು ಹೋಗಿದ್ದ ವಿಠಲ ಅವರ ಮೇಲೆಯೂ ಭರತ್ ಜೈನ್ ಹಲ್ಲೆಗೆ ಯತ್ನಿಸಿದ್ದರು.
ಸಂಜೆಯ ವೇಳೆಗೆ ಮತ್ತೆ ಇರ್ವತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಭರತ್ ಜೈನ್ ಆತನ ಸಹೋದರ ಭವಿಷತ್ ಜೈನ್ ಎಂಬವರು ಮತ್ತೆ 10 ಜನರೊಂದಿಗೆ ಬಂದು ಏಕಾಏಕಿ ರಾಡ್ ಹಾಗೂ ಕಟ್ಟಿಗೆಯಿಂದ ಜಯ ಮತ್ತು ಸುದರ್ಶನ್ ರವರ ಮೇಲೆ ಮಾರಣಾಂತಿಕ ಹಲ್ಲೆಗೈದು ಕೊಲೆ ಬೆದರಿಕೆ ಹಾಕಿ, ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿದ್ದರು.
ಹಲ್ಲೆಗೊಳಗಾದವರು ಚಿಕಿತ್ಸೆಗಾಗಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿಠಲ ನೀಡಿದ ದೂರಿನನ್ವಯ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.