ಕಾಸರಗೋಡು, ಜ.03 (DaijiworldNews/AA): ಯುವ ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಪೆರಿಯ ಕಳ್ಳಿಯೊಟ್ ನ ಕೃಪೇಶ್ (19) ಮತ್ತು ಶರತ್ ಲಾಲ್ (21) ರವರ ಕೊಲೆ ಪ್ರಕರಣದ ಹತ್ತು ಮಂದಿ ಆರೋಪಿಗಳಿಗೆ ಅವಳಿ ಜೀವಾವಧಿ ಸಜೆ ಹಾಗೂ ನಾಲ್ಕು ಮಂದಿಗೆ ತಲಾ ಐದು ವರ್ಷ ಶಿಕ್ಷೆ ಘೋಷಿಸಿ ಎರ್ನಾಕುಲಂ ಸಿಬಿಐ ನ್ಯಾಯಾಲಯ ಶುಕ್ರವಾರ ತೀರ್ಫು ನೀಡಿದೆ.


ಶಿಕ್ಷೆಗೊಳದವರಲ್ಲಿ ಉದುಮ ಮಾಜಿ ಶಾಸಕ ಕೆ. ವಿ ಕುಂಞ ರಾಮನ್, ಕಾಞ೦ಗಾಡ್ ಬ್ಲಾಕ್ ಪಂಚಾಯತ್ ಅಧ್ಯಕ್ಷ ಕೆ. ಮಣಿಕಂಠನ್ ಸೇರಿದ್ದಾರೆ. ಸಿಪಿಎಂ ಸ್ಥಳೀಯ ಸಮಿತಿ ಮಾಜಿ ಸದಸ್ಯ ಪೆರಿಯದ ಎ. ಪೀತಾಂಬರನ್ (51) ಒಂದನೇ ಆರೋಪಿಯಾಗಿದ್ದು, ಸಜಿ ಸಿ. ಜೋರ್ಜ್ (46), ಕೆ.ಎಂ ಸುರೇಶ್ (33), ಕೆ. ಅನಿಲ್ ಕುಮಾರ್ (41), ಗಿಜಿನ್ (32), ಆರ್. ಪ್ರಶಾಂತ್ (28), ಎ. ಅಶ್ವಿನ್ (24), ಸುಭೀಷ್ (24), ಟಿ. ರಂಜಿತ್ (52) ಮತ್ತು ಎ. ಸುರೇಂದ್ರನ್ (53) ಗೆ ಅವಳಿ ಜೀವಾವಧಿ ಸಜೆ ಹಾಗೂ ತಲಾ ಒಂದು ಲಕ್ಷ ರೂ. ದಂಡ ವಿಧಿಸಿ ತೀರ್ಫು ನೀಡಲಾಗಿದೆ. ಮಾಜಿ ಶಾಸಕ ಕೆ. ವಿ ಕುಂಞರಾಮನ್, ಕೆ. ಮಣಿಕಂಠನ್, ರಾಘವನ್ ವೆಳುತ್ತೊಳಿ, ಕೆ.ವಿ ಭಾಸ್ಕರನ್ ಗೆ ಐದು ವರ್ಷಗಳ ಸಜೆ ವಿಧಿಸಲಾಗಿದೆ.
2019 ರ ಫೆಬ್ರವರಿ 17 ರ ರಾತ್ರಿ ಕೃಪೇಶ್ ಮತ್ತು ಶರತ್ ಲಾಲ್ ರನ್ನು ಕೊಲೆಗೈಯ್ಯಲಾಗಿತ್ತು. ಪ್ರಕರಣದ ಬಗ್ಗೆ ಸ್ಥಳೀಯ ಪೊಲೀಸ್, ಕ್ರೈಮ್ ಬ್ರಾಂಚ್ ಹಾಗೂ ಸಿಬಿಐ ತನಿಖೆ ನಡೆಸಿತ್ತು. ಪ್ರಕರಣದಲ್ಲಿ ಒಟ್ಟು 24 ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು. ಈ ಪೈಕಿ ಹತ್ತು ಮಂದಿಯನ್ನು ನ್ಯಾಯಾಲಯ ಖುಲಾಸೆಗೊಳಿಸಿತ್ತು .
ಸಿಪಿಐ ಎಂ ಮತ್ತು ಕಾಂಗ್ರೆಸ್ ನಡುವೆ ಪೆರಿಯ ಪರಿಸರದಲ್ಲಿ ಘರ್ಷಣೆ ನಡೆದಿತ್ತು. ಈ ದ್ವೇಷ ಇಬ್ಬರ ಕೊಲೆಯಲ್ಲಿ ಕೊನೆಗೊಂಡಿತ್ತು 2019 ರ ಫೆಬ್ರವರಿ 17ರಂದು, ಕೃಪೇಶ್ ಮತ್ತು ಶರತ್ ಲಾಲ್ ಅವರು ದೇವಸ್ಥಾನದ ಉತ್ಸವದಿಂದ ಮನೆಗೆ ಹಿಂದಿರುಗುತ್ತಿದ್ದಾಗ ಕಳ್ಳಿಯೋಟ್-ತನ್ನಿತೋಡ್ ರಸ್ತೆಯಲ್ಲಿ ಹೊಂಚು ಹಾಕಿ ಕುಳಿತ್ತಿದ್ದ ಹಂತಕರು ಕಡಿದು ಕೊಲೆಗೈದಿದ್ದರು.
ಫೆಬ್ರವರಿ 19 ಪ್ರಮುಖ ಆರೋಪಿ ಎ. ಪೀತಾಂಬರನ್ ಅವರನ್ನು ಪ್ರಕರಣದ ಪ್ರಮುಖ ಆರೋಪಿಯಾಗಿ ಬಂಧಿಸಲಾಗಿತ್ತು. ಎರಡು ದಿನಗಳ ನಂತರ ಕೇರಳ ಪೊಲೀಸ್ ಕ್ರೈಂ ಬ್ರಾಂಚ್ ತನಿಖೆಯನ್ನು ವಹಿಸಿಕೊಂಡಿತ್ತು. ಮೇ 20 ರಂದು, ಕ್ರೈಂ ಬ್ರಾಂಚ್ ತನ್ನ ಚಾರ್ಜ್ಶೀಟ್ ಸಲ್ಲಿಸಿತ್ತು. ಅದರಲ್ಲಿ 14 ಆರೋಪಿಗಳನ್ನು ಹೆಸರಿಸಿತ್ತು. ಎಲ್ಲರೂ ಸಿಪಿಐ(ಎಂ) ಪಕ್ಷದೊಂದಿಗೆ ಸಂಪರ್ಕ ಹೊಂದಿದವರಾಗಿದ್ದರು.
ಸೆಪ್ಟೆಂಬರ್ 30, 2019 ರಂದು, ಕೇರಳ ಹೈಕೋರ್ಟ್ನ ಏಕಸದಸ್ಯ ಪೀಠ ಕ್ರೈಂ ಬ್ರಾಂಚ್ ಚಾರ್ಜ್ಶೀಟ್ ರದ್ದುಗೊಳಿಸಿ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಿತ್ತು. ಅಕ್ಟೋಬರ್ 26 ರಂದು, ರಾಜ್ಯ ಸರಕಾರ ಸಿಬಿಐ ತನಿಖೆಯ ವಿರುದ್ಧ ಹೈಕೋರ್ಟ್ನ ವಿಭಾಗೀಯ ಪೀಠಕ್ಕೆ ಮನವಿ ಸಲ್ಲಿಸಿತ್ತು. ಆಗಸ್ಟ್ 25ರಂದು ವಿಭಾಗೀಯ ಪೀಠವು ತನಿಖೆಯನ್ನು ಸಿಬಿಐಗೆ ವರ್ಗಾಯಿಸುವ ಏಕ ಸದಸ್ಯ ಪೀಠದ ಆದೇಶವನ್ನು ಎತ್ತಿಹಿಡಿದಿತ್ತು. ಸೆಪ್ಟೆಂಬರ್ 12ರಂದು, ಕೇರಳ ಸರಕಾರವು ಸುಪ್ರೀಂ ಕೋರ್ಟ್ನಲ್ಲಿ ಹೈಕೋರ್ಟ್ನ ತೀರ್ಪನ್ನು ಪ್ರಶ್ನಿಸಿತ್ತು. 2020 ರ ಡಿಸೆಂಬರ್ ಒಂದರಂದು, ಸುಪ್ರೀಂ ಕೋರ್ಟ್ ಕೂಡ ರಾಜ್ಯ ಸರ್ಕಾರದ ಅರ್ಜಿಯನ್ನು ವಜಾಗೊಳಿಸಿತ್ತು. ಪ್ರಕರಣವನ್ನು ಸಿಬಿಐಗೆ ವಹಿಸಲು ಅವಕಾಶ ಮಾಡಿಕೊಟ್ಟಿತ್ತು.
2020ರ ಡಿಸಂಬರ್ ರಂದು ಸಿಬಿಐ ಔಪಚಾರಿಕವಾಗಿ ತನಿಖೆಯ ಹೊಣೆಯನ್ನು ವಹಿಸಿಕೊಂಡಿತ್ತು. 2021 ರ ಡಿ. ಒಂದರಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಐವರನ್ನು ಬಂಧಿಸಿತ್ತು. 2023 ರ ಫೆಬ್ರವರಿ 2 ರಂದು ಕೊಚ್ಚಿಯ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಆರಂಭಿಸಿತ್ತು. ಕೊಲೆ ಪ್ರಕರಣವೂ ಕೇರಳವನ್ನೇ ಬೆಚ್ಚಿ ಬೀಳಿಸಿತ್ತು. ತೀರ್ಫು ಹೊರಬೀಳುವ ಹಿನ್ನಲೆಯಲ್ಲಿ ಪೆರಿಯ ಪರಿಸರದಲ್ಲಿ ಬಿಗು ಬಂದೋಬಸ್ತ್ ಕಲ್ಪಿಸಲಾಗಿತ್ತು. ಪೆರಿಯ ಸುತ್ತಮುತ್ತ ಕಟ್ಟೆಚ್ಚರ ವಹಿಸಲಾಗಿತ್ತು.