ಮಂಗಳೂರು, ಜೂ 09 (Daijiworld News/SM): ಫೇಸ್ಬುಕ್ ಮೂಲಕ ಶುರುವಾದ ಸ್ನೇಹ ಪ್ರೀತಿ ಮದುವೆ ಹೀಗೆ ಹಲವು ಆಯಾಮಗಳ ಬಳಿಕ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮಂಗಳೂರಿನ ಅತ್ತಾವರದಲ್ಲಿ ಜೂನ್ ೭ರಂದು ನಡೆದಿದ್ದು, ಕರಾವಳಿಗರನ್ನು ಬೆಚ್ಚಿ ಬೀಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆ ನಡೆಸಿದ ಆರೋಪಿಯನ್ನು ಪೊಲೀಸರು ಜೂನ್ 8ರ ಶನಿವಾರದಂದೇ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
ಆರೋಪಿ ಸಂದೀಪ್ ನನ್ನು ವಿಜಯಪುರ ಜಿಲ್ಲೆಯ ಸಿಂದಗಿ ಎಂಬಲ್ಲಿರುವ ಸಂಗಮ್ ಡಿಲೇಕ್ಸ್ ವಸತಿ ಗೃಹದಿಂದ ಬಂಧಿಸಲಾಗಿದೆ. ಜೂನ್ 9ರಂದು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗೆ ಕರೆ ತಂದು ವಿಚಾರಣೆ ನಡೆಸಿದ್ದು, ತನಿಖೆ ಮುಂದುವರೆದಿದೆ.
ಘಟನೆ ವಿವರ
ಚಿಕ್ಕಮಗಳೂರು ಜಿಲ್ಲೆ ತರಿಕೆರೆ ಮೂಲದ ವೈ.ಎನ್. ಮಂಜುನಾಥ್ ಎಂಬುವವರ ಪುತ್ರಿ ಅಂಜನಾ ವಸಿಷ್ಟ (22) ಎಂಬಾಕೆಯನ್ನು ಅವಳ ಫೇಸ್ಬುಕ್ ಪ್ರಿಯಕರ ವಿಜಯಪುರ ಜಿಲ್ಲೆ ಸಿಂಧಗಿ ಮೂಲದ ಸಂದೀಪ್ ರಾಥೋಡ್(24) ಎಂಬಾತ ಜೂನ್ ೭ರ ಶುಕ್ರವಾರ ಹತ್ಯೆ ಮಾಡಿದ್ದಾನೆ. ಅತ್ತಾವರದ ಮೆಡಿಕಲ್ ಕಾಲೇಜೊಂದರ ಪಕ್ಕದಲ್ಲಿರುವ ಪಿಜಿಯಲ್ಲಿ ಅಂಜನಾಳ ಕುತ್ತಿಗೆಗೆ ವಯರ್ ನಿಂದ ಬಿಗಿದು ಸಂದೀಪ್ ಕೊಲೆ ಮಾಡಿದ್ದಾನೆ. ಹತ್ಯೆಯಾದ ಅಂಜನಾ ನಗರದಲ್ಲಿ ಬ್ಯಾಂಕಿಂಗ್ ಕೋಚಿಂಗ್ ಪಡೆಯುತ್ತಿದ್ದಳು.
ಇನ್ನು ಅಂಜನಾ ಉಜಿರೆಯ ಕಾಲೇಜಿನಲ್ಲಿ ಎಂಎಸ್ಸಿ ಪದವಿ ಪಡೆಯುತ್ತಿದ್ದ ಸಂದರ್ಭದಲ್ಲಿ ವಿಜಯಪುರದ ಸಂದೀಪ್ ರಾಥೋಡ್ ಎಂಬಾತ ಫೇಸ್ ಬುಕ್ ನಲ್ಲಿ ಪರಿಚಯವಾಗಿದ್ದ. ಫೇಸ್ಬುಕ್ ಮೂಲಕ ಇಬ್ಬರ ಸ್ನೇಹ ಬೆಳೆದು ಪ್ರೀತಿಗೆ ತಿರುಗಿತ್ತು. ಇದೇ ಸಂದರ್ಭದಲ್ಲಿ ಬ್ಯಾಂಕಿಂಗ್ ಕೋಚಿಂಗ್ ಗಾಗಿ ಅಂಜನಾ ಮಂಗಳೂರಿಗೆ ಬಂದಿದ್ದಾಗ ಸಂದೀಪ್ ಸಹ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕ ಪರೀಕ್ಷೆಗೆ ತರಬೇತಿಗಾಗಿ ನಗರಕ್ಕೆ ಬಂದಿದ್ದ. ಪರಸ್ಪರ ಪ್ರೀತಿಸುತ್ತಿದ್ದ ಇಬ್ಬರೂ ಮಂಗಳೂರಿನಲ್ಲಿ ಒಂದೇ ಕೊಠಡಿಯಲ್ಲಿರಲು ನಿರ್ಧಾರ ಮಾಡಿಕೊಂಡೇ ನಗರಕ್ಕೆ ಕಾಲಿಟ್ಟಿದ್ದರು. ಅದರಂತೆ ಅತ್ತಾವರದ ಪಿಜಿಯಲ್ಲಿ ಇವರು ಜೊತೆಯಾಗಿದ್ದರು.
ಕದ್ರಿ ದೇವಸ್ಥಾನದಲ್ಲಿ ಮದುವೆಯಾಗಿದ್ದರು:
ಇನ್ನು ಸಾಮಾಜಿಕ ಜಾಲ ತಾಣದಲ್ಲಿ ಪರಿಚಯವಾಗಿ ಪ್ರೀತಿಸುತ್ತಿದ್ದ ಈ ಜೋಡಿ ನಗರದ ಕದ್ರಿ ದೇವಸ್ಥಾನದಲ್ಲಿ ಮದುವೆಯಾಗಿದ್ದರು ಎಂದು ತಿಳಿದುಬಂದಿದೆ. ಆದರೆ, ಈ ವಿಚಾರವನ್ನು ಅವರು ಬಹಿರಂಗ ಪಡಿಸಿರಲಿಲ್ಲ. ನಂತರ ಇಬ್ಬರು ಲಾಡ್ಜ್ ಗಳಲ್ಲಿ ಉಳಿದುಕೊಳ್ಳುತ್ತಿದ್ದರು ಎಂದು ವಿಚಾರಣೆಯ ವೇಳೆ ತಿಳಿದುಬಂದಿದೆ.
ಇನ್ನು ಈ ನಡುವೆ ಅಂಜನಾಳ ಮನೆಯವರು ಅಂಜನಾಳಿಗೆ ಮದುವೆ ಮಾಡಲು ಹುಡುಗನನ್ನು ನಿಶ್ಚಯಿಸಿದ್ದು, ಅದಕ್ಕೆ ಅಂಜನಾಳು ಕೂಡಾ ಒಪ್ಪಿಕೊಂಡಿದ್ದಳು ಎನ್ನಲಾಗಿದೆ. ಈ ವಿಚಾರವನ್ನು ಆಕೆ ಸಂದೀಪ್ ನಿಗೂ ತಿಳಿಸಿದ್ದಳು. ಆಕೆಯ ಮಾತನ್ನು ಸ್ವೀಕರಿಸಿದ್ದ ಸಂದೀಪ್ ರಾಠೋಡ್ ಅಂಜನಾಳಿಗೆ ಮಂಗಳೂರಿನ ರೂಮಿಗೆ ಬರುವಂತೆ ತಿಳಿಸಿದ್ದ.
ಆತನ ಮಾತಿಗೆ ಒಪ್ಪಿಕೊಂಡ ಅಂಜನಾ, ಜೂನ್ 7ರಂದು ಮಂಗಳೂರಿನ ಆತನ ರೂಮಿಗೆ ಬಂದಿದ್ದಳು. ಆ ಸಮಯ ಸಂದೀಪ್ ರಾಠೋಡ್ ಹಾಗೂ ಅಂಜನಾಳ ಮಧ್ಯೆ ಜಗಳವಾಗಿ ಅಂಜನಾಳು ಸಂದೀಪ್ ರಾಠೋಡ್ ನನ್ನು ನಿರಾಕರಿಸಿದ್ದಾಳೆ. ಅದೇ ಧ್ವೇಷದಿಂದ ಆರೋಪಿ ಸಂದೀಪ್ ರಾಠೋಡ್ ನು ಬಾಡಿಗೆ ರೂಮಿನೊಳಗಡೆ ಆಕೆಯ ಕುತ್ತಿಗೆಗೆ ಟಿ.ವಿ ಕೇಬಲ್ ನ್ನು ಸುತ್ತಿ ಹತ್ಯೆ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾನೆ.
ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.