ಬಂಟ್ವಾಳ, ಜ.04(DaijiworldNews/TA): ಕಾಲ ಬದಲಾದಂತೆ ಜೀವನಮೌಲ್ಯಗಳ ಜೊತೆಗೆ ಸಾಹಿತ್ಯದ ರೂಪವೂ ಬದಲಾಗಿ ಇಂದಿನ ಬರವಣಿಗೆ ಕೇವಲ ಲೈಕ್ ಮಾಡಿ, ಶೇರ್ ಮಾಡಿ ಮತ್ತು ಸಬ್ ಸ್ಕ್ರೈಬ್ ಮಾಡಿ ಗೆ ಸೀಮಿತ ವಾಗುತ್ತಿದೆ ಎಂದು ನಾಗವೇಣಿ ಮಂಚಿ ಆತಂಕವ್ಯಕ್ತಪಡಿಸಿದರು.




ದ.ಕ.ಜಿಲ್ಲಾ ಕಸಾಪ ಬಂಟ್ವಾಳ ತಾಲೂಕು ಘಟಕದ ಆಶ್ರಯದಲ್ಲಿ ಮಂಚಿ-ಕೊಳ್ಳಾಡು ಸರಕಾರಿ ಪ್ರೌಢಶಾಲೆ ಹಿರಿಯ ವಿದ್ಯಾರ್ಥಿ ಸಂಘ (ರಿ)ದ ಸಹಯೋಗದಲ್ಲಿ ಮಂಚಿ-ಕೊಳ್ಳಾಡು ಸರಕಾರಿ ಪ್ರೌಢಶಾಲೆಯ ಬಿ.ವಿ.ಕಾರಂತ ಸಭಾಂಗಣ,ದಿ.ಕನ್ನಡ ಪಂಡಿತ್ ಎ.ಪಿ.ತಿಮ್ಮಯನ್ ವೇದಿಕೆಯಲ್ಲಿ ಶನಿವಾರ ಸಂಜೆ ಎರಡುದಿನಗಳ ಕಾಲ ನಡೆಯುವ ಬಂಟ್ವಾಳ ತಾಲೂಕಿನ 23ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮಾಜದ ಆರೋಗ್ಯ ಪೂರ್ಣ ಬದುಕನ್ನು ಪೋಷಿಸುವ ಬರಹವೇ ನಿಜವಾದ ಮಾನವೀಯತೆ, ಪ್ರೀತಿ ಕೊಡುತ್ತದೆ ಅದೇ ನಿಜವಾದ ಸಾಹಿತ್ಯ ಎಂದರು. ಸಾಹಿತ್ಯ ಸಮ್ಮೇಳನಗಳು ನಮ್ಮ ಹಿಂದಿನ ಬರಹಗಾರರು ಕಂಡ ಕನ್ನಡದ ಉಜ್ವಲ ಭವಿಷ್ಯದ ಕನಸನ್ನು ಸಾಕಾರಗೊಳಿಸುವಲ್ಲಿ ಪೂರಕ ಭೂಮಿಕೆಗಳಾಗುತ್ತಿವೆ. ಆದರೆ ಅದಕ್ಕಾಗಿ ನಾವು ಬಹಿರಂಗವಾಗಿ ಹೇಗೋ ಹಾಗೆಯೇ ಅಂತರಂಗದಲ್ಲೂ ಕನ್ನಡ ಉಸಿರಾಗಬೇಕು, ಸರ್ವಸ್ವವಾಗಬೇಕು ಎಂದು ಬಂಟ್ವಾಳ ತಾಲೂಕು 23 ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಎಳೆಯರ ಗೆಳೆಯ ಮುಳಿಯ ಶಂಕರ ಭಟ್ಟ ಆಶಯವ್ಯಕ್ತಪಡಿಸಿದ್ದಾರೆ.
ಸಾಹಿತ್ಯವು ಸಂಸ್ಕೃತಿಯ ಸಂಬಂಧಿಯಾಗಿದ್ದು, ಇದು ಜನಜೀವನದ ಕೈಗನ್ನಡಿ ಎಂಬುದನ್ನು ನಾವು ಒಪ್ಪಿಕೊಳ್ಳಬೇಕು. ಸಾಹಿತ್ಯವು ಸಾಮಾಜಿಕ ಬದುಕನ್ನು ಉಜ್ವಲಗೊಳಿಸಿ, ಜನಜೀವನಕ್ಕೆ ಉತ್ತಮ ಪ್ರೇರಣೆ ಕೊಡುವ ಪ್ರಧಾನ ಸಲಕರಣೆಯಾಗಿದೆ, ಸಮಗ್ರ ಸಾಮಾಜಿಕ ಹಿತದ ಕೃತಿಗಳೆಲ್ಲವೂ ಸಾಹಿತ್ಯವೇ ಆಗಿದ್ದರೂ ಬರೆದ ಬರಹಗಳೆಲ್ಲವೂ ‘ಸಾಹಿತ್ಯ’ ಎನಿಸಲಾರದು. ಬರಹಗಳಲ್ಲಿ ಸಾಮಾಜಿಕ-ಸಾಂಸ್ಕೃತಿಕ ಹಿತವನ್ನು ಸಾಧಿಸುವ ಗುಣ ಅಗತ್ಯ ಎಂದವರು ಅಭಿಪ್ರಾಯಿಸಿದರು. ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುವ ಕೃತಿಗಳಾಗಲೀ, ಕಲಾಪ್ರದರ್ಶನವಾಗಲೀ ಸಮಾಜದ ಸ್ವಾಸ್ಥ್ಯ ಕೆಡಿಸುತ್ತದೆ ಎನ್ನುವ ಎಚ್ಚರ ಕಾಯ್ದುಕೊಳ್ಳುವುದು ಎಲ್ಲರ ಬಾಧ್ಯತೆ. ಆಡಳಿತ ವರ್ಗವೂ ಇದನ್ನು ಸಮರ್ಪಕವಾಗಿ ಬೆಂಬಲಿಸಬೇಕು ಎಂದರು.
ಸ್ವಾತಂತ್ರ್ಯ ವನ್ನು ಸ್ವೇಚ್ಛಾಚಾರ ಎಂದು ವ್ಯಾಖ್ಯಾನಿಸಿ ಮನಬಂದಂತೆ ವರ್ತಿಸುವುದು ಅನರ್ಥಕಾರಿ. ಕಾವ್ಯ, ನಾಟಕ, ಕತೆ-ಕವಿತೆ, ನೀಳ್ಗತೆ-ಕಾದಂಬರಿಗಳು ಜನಪದದ ಜೊತೆ ಜೊತೆಗೆ ಚಿತ್ರ, ವ್ಯಂಗ್ಯಚಿತ್ರ, ಸಂಗೀತ, ಸುಗಮ ಸಂಗೀತ, ನೃತ್ಯ, ಹರಿಕೀರ್ತನೆ, ಗಮಕ ವಾಚನ, ಶಿಲ್ಪಕಲೆ, ವರ್ಣಚಿತ್ರಗಳಂತಹ ಬಹುತೇಕ ಪ್ರಕಾರಗಳು ಸಂಸ್ಕೃತಿಯ ವೈಭವವನ್ನು ಪ್ರತಿಫಲಿಸುತ್ತದೆ ಎಂದ ಅವರು, ಪತ್ರಿಕಾ ಮಾಧ್ಯಮವೂ ಸಾಹಿತ್ಯ ಸಂಸ್ಕೃತಿಯ ಉಜ್ಜೀವನಕ್ಕೆ ಚೇತೋಹಾರಿಯಾಗಿ ಕೊಡುಗೆ ನೀಡಿರುವುದನ್ನು ಉಲ್ಲೇಖಿಸಿದರು.
ಸಾಹಿತ್ಯ ರಚನೆಗೆ ನಿರಂತರ ಓದು, ಅಧ್ಯಯನ ಬೇಕು ಎಂದ ಅವರು, ಶಿಶು ಸಾಹಿತ್ಯದ ಯಾವುದೇ ವಿಭಾಗಗಳಿರಲಿ, ಶಿಶು ಕವಿಗಳಂತೂ ಎಳೆಯರ ಮನಸ್ಸು-ವಯಸ್ಸು, ಮನೋಧರ್ಮ, ಸರಳ ಪದಗಳು, ತಿಳಿಹಾಸ್ಯ, ಗೇಯತೆ, ಛಂದ ನೀತಿ, ಪರಿಸರ, ಮಾನವೀಯತೆ, ಪ್ರಾಣಿದಯೆ, ಪರಿಚಿತ ವಸ್ತು ವಿಚಾರ, ಮನೋರಂಜನೆ, ಕೌತುಕ, ರೋಚಕತೆಗಳನ್ನು ಒಳಗೊಂಡಿದ್ದರೆ ಎಲ್ಲರ ಮನಮುಟ್ಟಬಲ್ಲವು, ಹಾಗೆಂದು ಇವುಗಳನ್ನು ಬಲವಂತವಾಗಿ ತುರುಕುವುದರಿಂದ ಲಾಭವಿಲ್ಲ. ಶಿಶು ಸಾಹಿತ್ಯದಲ್ಲಿ ಕೈಯಾಡಿಸುವವರು ಮಕ್ಕಳ ಮನೋಧರ್ಮ, ವಯೋಧರ್ಮ, ಪರಿಸರದ ಸಾಮಿಪ್ಯವನ್ನು ತಮ್ಮದಾಗಿಸಿಕೊಂಡು ಕೃತಿ ರಚಿಸಿದಾಗ ಯಶಸ್ಸು ಕಷ್ಟವಲ್ಲ ಎನ್ನುತ್ತಾ ಮಕ್ಕಳ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿರುವ ಮಕ್ಕಳಸಾಹಿತ್ಯ ಸಂಗಮ ಸಹಿತ ಹಲವು ಸಾಹಿತಿಗಳನ್ನು ಸ್ಮರಿಸಿದರು.
ಯಾವುದೇ ಭಾಷೆಯ ಕಲಿಕೆ ತಪ್ಪಲ್ಲ, ಆದರೆ ನಮ್ಮಲ್ಲಿ ಬೇರೂರಿಸುವ ಆಂಗ್ಲ ಭಾಷಾ ವ್ಯಾಮೋಹ ಕೆಲವು ಸರಕಾರಿ ಶಾಲೆಗಳು, ಖಾಸಗಿ ಶಾಲೆಗಳು ಸ್ಥಗಿತಗೊಳ್ಳುವಂತೆ ಮಾಡಿದೆ ಎಂದು ತಮ್ಮ ಭಾಷಣದಲ್ಲಿ ವಿಷಾಧ ವ್ಯಕ್ತಪಡಿಸಿದ ಅವರು, ಸರ್ಕಾರದ ಶಿಕ್ಷಣ ನೀತಿ, ಪೋಷಕರು ಎದುರಿಸುವ ಭೀತಿ, ಎಳೆಯ ಪೀಳಿಗೆಯ ಶಿಕ್ಷಣ ವ್ಯವಸ್ಥೆಯ ರೀತಿ - ಎಲ್ಲವೂ ಮುಂದೊಂದು ದಿನ ಸಮಾಜವನ್ನು ಹಳಿ ತಪ್ಪಿಸುವ ಆತಂಕ ವ್ಯಕ್ತಪಡಿಸಿದರು. ಭಾಷೆಯ ಅಧ್ಯಯನ-ಅಧ್ಯಾಪನ-ಅವಿರತ ಬಳಕೆಯಿಂದ ಮಾತ್ರ ಸಾಹಿತ್ಯ ಕೃಷಿಗೆ ಪೂರಕ ವಾತಾವರಣ ನೆಲೆಗೊಳ್ಳಬಹುದು ಎಂದವರು ಕಿವಿಮಾತು ಹೇಳಿದರು.