ಮಂಜೇಶ್ವರ,ಜ.04(DaijiworldNews/TA): ಜನರ ಜೊತೆ ನೇರ ಸಂವಾದ ನಡೆಸುವ ಮೂಲಕ ಅವರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಕಂಡುಕೊಳ್ಳಲು ಅದಾಲತ್ ಗಳು ನೆರವಾಗುತ್ತಿದೆ. ವರ್ಷಗಳಿಂದ ನೆನಗುದಿಗೆ ಬಿದ್ದಿರುವ ಕಡತಗಳು ಹಾಗೂ ಸಮಸ್ಯೆಗಳಿಗೆ ಅದಾಲತ್ ನಿಂದ ಜನರಿಗೆ ಸ್ಪಂದನೆ ಲಭಿಸುತ್ತಿದೆ ಎಂದು ಕೇರಳ ನೋಂದಣಿ ಹಾಗೂ ಪ್ರಾಚ್ಯ ವಸ್ತು ಸಂಗ್ರಹಾಲಯ ಸಚಿವ ರಾಮಚಂದ್ರನ್ ಕಡನ್ನ ಪಳ್ಳಿ ಹೇಳಿದರು .



ಅವರು ಶನಿವಾರ ಉಪ್ಪಳ ನಯಾಬಜಾರ್ ಲಯನ್ಸ್ ಭವನದಲ್ಲಿ ನಡೆದ ಮಂಜೇಶ್ವರ ತಾಲೂಕು ಅದಾಲತ್ ಉದ್ಘಾಟಿಸಿ ಮಾತನಾಡುತ್ತಿದ್ದರು . ಕೇರಳ ಅಲ್ಪಸಂಖ್ಯಾತ ಕಲ್ಯಾಣ ಹಾಗೂ ಕ್ರೀಡಾ ಸಚಿವ ವಿ . ಅಬ್ದುಲ್ ರಹಮಾನ್ ಅಧ್ಯಕ್ಷತೆ ವಹಿಸಿ ಮಾತನಾಡಿ , ಇಂತಹ ಅದಾಲತ್ ಕೇರಳದಲ್ಲಿ ಮಾತ್ರ ನಡೆಯುತ್ತಿದೆ. ಸರಕಾರ ಜನರ ಜೊತೆ ಸಂಪರ್ಕ ಹಾಗೂ ಸಂವಾದ ನಡೆಸಲು ಈ ಅದಾಲತ್ ನೆರವಾಗಲಿದೆ ಎಂದು ಸಚಿವರು ಹೇಳಿದರು .
ಶಾಸಕ ಎ . ಕೆ .ಎಂ ಅಶ್ರಫ್ , ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ , ಜಿಲ್ಲಾ ಪಂಚಾಯತ್ ಸದಸ್ಯ ಜಮೀಲಾ ಸಿದ್ದಿಕ್ ದಂಡೆಗೋಳಿ , ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಶಮೀನಾ ಟೀಚರ್ , ಗ್ರಾಮ ಪಂಚಾಯತ್ ಅಧ್ಯಕ್ಷರಾದ ಖದೀಜತ್ ರಿಸಾನ , ಜೀನ್ ಲವೀನಾ ಮೊಂತೇರೊ , ಸುಬ್ಬಣ್ಣ ಆಳ್ವ , ಜೆ . ಎಸ್ ಸೋಮಶೇಖರ್ , ಎಸ್ .. ಭಾರತಿ , ತುಳು ಅಕಾಡಮಿ ಅಧ್ಯಕ್ಷ ಕೆ .ಆರ್ ಜಯಾನಂದ , ಜಿಲ್ಲಾ ಹೆಚ್ಚುವರಿ ದಂಡನಾಧಿಕಾರಿ ಪಿ . ಅಖಿಲ್ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಕೆ . ಇಂಪಾಶೇಖರ್ ಸ್ವಾಗತಿಸಿ , ಕಂದಾಯಾಧಿಕಾರಿ ಪಿ . ಬಿನು ಮೋನ್ ವಂದಿಸಿದರು.
ಅದಾಲತ್ ಗೆ ಲಭಿಸಿದ 261 ಅರ್ಜಿಗಳು:
ಮಂಜೇಶ್ವರ ತಾಲೂಕು ಅದಾಲತ್ ಗೆ 261 ಅರ್ಜಿಗಳು ಲಭಿಸಿದವು . 131 ಅರ್ಜಿಗಳು ಆನ್ ಲೈನ್ ಮೂಲಕ ಹಾಗೂ 106 ಅರ್ಜಿಗಳು ನೇರವಾಗಿ ಲಭಿಸಿವೆ. ಹೊಸದಾಗಿ ಲಭಿಸಿದ ಅರ್ಜಿಗಳ ಬಗ್ಗೆ 15ದಿನಗಳೊಳ ಗೆ ತೀರ್ಫು ಕಲ್ಪಿಸಲಾಗುವುದು ಎಂದು ಸಚಿವರು ಹೇಳಿದರು. ಅದಾಲತ್ ನಲ್ಲಿ 21 ಪಡಿತರ ಚೀಟಿಗಳನ್ನು ವಿತರಿಸಲಾಯಿತು. 15 ಮಂದಿಗೆ ಆದ್ಯತಾ ಚೀಟಿಗಳನ್ನು ಸಚಿವ ರು ವಿತರಿಸಿದರು.