ಮಂಗಳೂರು, ಜೂ10(Daijiworld News/SS): ಮಂಗಳೂರು, ಉಡುಪಿಯಲ್ಲಿ ಮಳೆಯ ಜೊತೆಗೆ ಚಂಡಮಾರುತವೂ ಉಂಟಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈ ಹಿನ್ನಲೆಯಲ್ಲಿ ಕರಾವಳಿ ಭಾಗದ ಜನತೆ ಎಚ್ಚರಿಕೆ ವಹಿಸಬೇಕೆಂದು ಇಲಾಖೆ ತಿಳಿಸಿದೆ.
ಅರಬ್ಬೀ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಇನ್ನಷ್ಟು ತೀವ್ರಗೊಂಡು ಚಂಡಮಾರುತವಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಪರಿಣಾಮ ಲಕ್ಷದ್ವೀಪ, ಕೇರಳ, ಕರ್ನಾಟಕ, ಮಹಾರಾಷ್ಟ್ರ ಮತ್ತು ಗುಜರಾತ್ನಲ್ಲಿ ಭಾರೀ ಗಾಳಿ-ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಸಮುದ್ರದಿಂದ ಕಿನಾರೆಯತ್ತ ಈಗಾಗಲೇ ರಭಸವಾಗಿ ಗಾಳಿ ಬೀಸಲಾರಂಭಿಸಿದೆ. ಇದು ಮುಂದಿನ 2-3 ದಿನ ಇನ್ನಷ್ಟು ತೀವ್ರಗೊಳ್ಳಲಿದೆ. ಪ್ರಸ್ತುತ ನಿರ್ಮಾಣವಾಗಿರುವ ವಾಯುಭಾರ ಕುಸಿತ 36 ಗಂಟೆಗಳಲ್ಲಿ ಚಂಡಮಾರುತದ ಸ್ವರೂಪ ಪಡೆಯಲಿದ್ದು, ವಾಯವ್ಯ ದಿಕ್ಕಿನತ್ತ ಚಲಿಸಲಿದೆ ಎಂದು ತಿಳಿದುಬಂದಿದೆ.
ಈಗಾಗಲೇ ಅರಬ್ಬೀ ಸಮುದ್ರಕ್ಕೆ ಹೊಂದಿಕೊಂಡಂತಿರುವ ರಾಜ್ಯಗಳಿಗೆ ಭಾರತೀಯ ಹವಾಮಾನ ಇಲಾಖೆಯು ಚಂಡಮಾರುತದ ಕುರಿತಂತೆ ಎಚ್ಚರಿಕೆ ನೀಡಿದೆ. ಕೇರಳ ಮತ್ತು ಕರ್ನಾಟಕ ಕರಾವಳಿಯಲ್ಲಿ ಭಾರೀ ಗಾಳಿ-ಮಳೆಯಾಗಲಿದೆ ಎಂದು ಆರೆಂಜ್ ಬಣ್ಣದ ಎಚ್ಚರಿಕೆ ನೀಡಿದೆ. ಜೂ. 11, 13ಕ್ಕೆ ಕೇರಳ ಮತ್ತು ಕರ್ನಾಟಕ ಕರಾವಳಿಗೆ ಹಳದಿ ಬಣ್ಣದ ಎಚ್ಚರಿಕೆ ನೀಡಲಾಗಿದೆ.
ಜೂ. 12ರ ವೇಳೆಗೆ ಕರ್ನಾಟಕ ಕರಾವಳಿಯನ್ನು ದಾಟಿ ಮಹಾರಾಷ್ಟ್ರ ಮತ್ತು ಗುಜರಾತ್ ಕರಾವಳಿಯತ್ತ ಚಂಡಮಾರುತ ಚಲಿಸಲಿದೆ. ಈ ಸಂದರ್ಭ ಗಾಳಿ 70ರಿಂದ 80 ಕಿ.ಮೀ. ವರೆಗೆ ಹಾಗೂ 13ರಂದು 90ರಿಂದ 100 ಕಿ.ಮೀ. ವರೆಗೂ ತಲುಪಲಿದೆ. ಅನಂತರ ಚಂಡಮಾರುತದ ವೇಗ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.