ಮಂಗಳೂರು, ಜ.05 (DaijiworldNews/AA): ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಇಂದು ಮೂಲ್ಕಿಗೆ ಭೇಟಿ ನೀಡಿದ್ದು ಈ ವೇಳೆ ಅವರು ಸ್ಥಳೀಯ ನಾಗರಿಕರ ಕುಂದುಕೊರತೆಗಳನ್ನು ಆಲಿಸಿದ್ದಾರೆ.



ಮೂಲ್ಕಿಯ 'ಹೊಟೇಲ್ ಪುನರೂರು'ನಲ್ಲಿ ಇಂದು ಬೆಳಗ್ಗೆ ಸಾರ್ವಜನಿಕರನ್ನು ಕ್ಯಾ. ಚೌಟ ಅವರು ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಈ ಭಾಗದ ಸ್ಥಳೀಯ ನಿವಾಸಿಗಳು ಹಾಗೂ ಮೂಲ್ಕಿಯ ಅಭಿವೃದ್ದಿಗಾಗಿ ಶ್ರಮಿಸುತ್ತಿರುವ ನಾಗರಿಕರ ತಂಡವು ಮೂಲ್ಕಿ ರೈಲು ನಿಲ್ದಾಣ ಮೂಲಸೌಕರ್ಯ ಅಭಿವೃದ್ದಿ ಮತ್ತಿತರ ಸಮಸ್ಯೆಗಳ ಬಗ್ಗೆ ಅಹವಾಲು ಸಲ್ಲಿಸಿದರು.
ಮನವಿ ಅಲಿಸಿದ ಕ್ಯಾ. ಚೌಟ ಅವರು ಪ್ರತಿಕ್ರಿಯಿಸಿ, ಮೂಲ್ಕಿ ರೈಲು ನಿಲ್ದಾಣ ಅಭಿವೃದ್ದಿಗಾಗಿ ನಾನು ಸಕಲ ರೀತಿಯಲ್ಲೂ ಶ್ರಮಿಸುತ್ತೇನೆ. ಆದರೆ ಕೊಂಕಣ ರೈಲ್ವೆಯು ಅನುಭವಿಸುತ್ತಿರುವ ನಷ್ಟದಿಂದಾಗಿ ಕೊಂಕಣ ಮಾರ್ಗದ ಯಾವುದೇ ರೈಲು ನಿಲ್ದಾಣಗಳು ಅಭಿವೃದ್ಧಿಗೊಂಡಿಲ್ಲ. ಹೀಗಾಗಿ ಭಾರತೀಯ ರೈಲ್ವೆಯೊಂದಿಗೆ ಕೊಂಕಣ ರೈಲ್ವೆಯನ್ನು ವಿಲೀನಗೊಳಿಸಿದರೆ ಈ ಸಮಸ್ಯೆಗೂ ಪರಿಹಾರ ದೊರಕಲಿದೆ. ಈ ನಿಟ್ಟಿನಲ್ಲಿ ವಿಲೀನ ಪ್ರಕ್ರಿಯೆಗೆ ನಾನು ಈಗಾಗಲೇ ಕಾರ್ಯೋನ್ಮುಖನಾಗಿದ್ದೇನೆ ಎಂದು ಭರವಸೆ ನೀಡಿದ್ದಾರೆ.
ಮೂಲ್ಕಿ ತಾಲೂಕಿನ ರಸ್ತೆ ಅಭಿವೃದ್ದಿ, ನೀರಿನ ಸಮಸ್ಯೆ, ಇತರ ಮೂಲಸೌಕರ್ಯ ಅಭಿವೃದ್ದಿ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಸ್ಪಂದಿಸುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ. ಈ ಬಗ್ಗೆ ಪರಿಶೀಲಿಸಿದ ಸಂಸದರು, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವುದಕ್ಕೆ ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದಾರೆ.