ಉಡುಪಿ,ಜ.05(DaijiworldNews/TA): ಅಕ್ರಮ ವೇಶ್ಯಾವಾಟಿಕೆ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಮಣಿಪಾಲ ಪೊಲೀಸರು ಶಿವಳ್ಳಿ ಗ್ರಾಮದ ಪೆರಂಪಳ್ಳಿ ಬಡಾವಣೆಯ ಅಪಾರ್ಟ್ಮೆಂಟ್ ವೊಂದರ ಮೇಲೆ ದಾಳಿ ನಡೆಸಿ ಮಹಿಳೆಯೊಬ್ಬರನ್ನು ರಕ್ಷಿಸಿದ್ದು, ಅಕ್ರಮ ವೇಶ್ಯಾವಾಟಿಕೆ ಕೇಂದ್ರ ನಡೆಸುತ್ತಿದ್ದ ಮಹಿಳೆ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ.

ಉಪ ಪೊಲೀಸ್ ವರಿಷ್ಠಾಧಿಕಾರಿ ಪ್ರಭು ಡಿ ಮಾರ್ಗದರ್ಶನದಲ್ಲಿ ಪೆರಂಪಳ್ಳಿ, ಶಿವಳ್ಳಿ ಗ್ರಾಮದ ಅಪಾರ್ಟ್ಮೆಂಟ್ ಮೇಲೆ ದಾಳಿ ನಡೆಸಿದ್ದಾರೆ. ಮಣಿಪಾಲ ಪೊಲೀಸ್ ಇನ್ಸ್ಪೆಕ್ಟರ್ ದೇವರಾಜ್ ಟಿ.ವಿ. ನೇತೃತ್ವದಲ್ಲಿ ಪಿಎಸ್ಐ ಅನಿಲ್, ಎಎಸ್ಐ ವಿವೇಕ್ ಹಾಗೂ ತಂಡದ ಸದಸ್ಯರಾದ ವಿದ್ಯಾ, ಇಮ್ರಾನ್, ಪ್ರಸನ್, ಮಂಜುನಾಥ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
ದಾಳಿಯ ವೇಳೆ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ: ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ರಘುನಂದನ್ (40) ಮತ್ತು ದಾವಣಗೆರೆ ಜಿಲ್ಲೆಯ ಹರಿಹರದ ಅಮೀನಾ ಬೇಗಂ (55). ವೇಶ್ಯಾವಾಟಿಕೆಗಾಗಿ ಶೋಷಣೆಗೆ ಒಳಗಾಗುತ್ತಿದ್ದ ಬೆಂಗಳೂರಿನ ಮಹಿಳೆಯೊಬ್ಬರನ್ನು ರಕ್ಷಿಸಲಾಗಿದೆ.
ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇನ್ಸ್ಪೆಕ್ಟರ್ ದೇವರಾಜ್ ಟಿ.ವಿ ನೇತೃತ್ವದ ತನಿಖಾ ತಂಡದ ಕಾರ್ಯದಿಂದ ಪ್ರಮುಖ ಆರೋಪಿ ಹಾಸನ ಜಿಲ್ಲೆ ಹಿರೀಸಾವೆ ಗ್ರಾಮದ ರವೀಶ್ ಬಂಧನವಾಗಿದೆ. ಮಣಿಪಾಲ ಪೊಲೀಸರ ಕ್ಷಿಪ್ರ ಮತ್ತು ಪರಿಣಾಮಕಾರಿ ಕಾರ್ಯಾಚರಣೆಗಾಗಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿದ್ದಾರೆ.