ಉಡುಪಿ, ಜ.06 (DaijiworldNews/AA): ಹೂಡಿಕೆ ಹಣಕ್ಕೆ ಕಮಿಷನ್ ನೀಡುವುದಾಗಿ ನಂಬಿಸಿ ಮಹಿಳೆಗೆ 12.46 ಲಕ್ಷ ರೂ. ಮೋಸ ಮಾಡಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಳ್ಳಿ ಗ್ರಾಮದ ಸಪ್ನಾ(28) ಎಂಬವರ ಇನ್ಸ್ಟಾಗ್ರಾಮ್ ಖಾತೆಗೆ ಡಿ.9ರಂದು 'ವರ್ಕ್ ಪ್ರಮ್ ಹೋಮ್' ಲಿಂಕ್ ಬಂದಿದೆ. ಅದನ್ನು ಓಪನ್ ಮಾಡಿದ ಬಳಿಕ ಆರಂಭದಲ್ಲಿ 200ರೂ. ಹಣ ಹೂಡಿಕೆ ಮಾಡಲು ತಿಳಿಸಲಾಗಿತ್ತು. ನಂತರ ಅದಕ್ಕೆ 500 ರೂ. ಕಮಿಷನ್ ದೊರೆತಿದೆ.
ಇದನ್ನು ನಂಬಿದ ಸಪ್ನಾ ಹೆಚ್ಚಿನ ಕಮಿಷನ್ ಬರುವುದಾಗಿ ನಂಬಿ ಡಿ.9ರಿಂದ ಡಿ.28ರ ಮಧ್ಯಾವಧಿಯಲ್ಲಿ ಅಪರಿಚಿತರು ತಿಳಿಸಿದ ವಿವಿಧ ಬ್ಯಾಂಕಿನ ಖಾತೆಗಳಿಗೆ ಒಟ್ಟು 12.46 ಲಕ್ಷ ರೂ. ಹಣವನ್ನು ಹೂಡಿಕೆ ಮಾಡಿದ್ದಾರೆ. ಬಳಿಕ ದುಷ್ಕರ್ಮಿಗಳು ಹೂಡಿಕೆ ಹಣವನ್ನು ಹಿಂತಿರುಗಿಸದೆ ವಂಚಿಸಿರುವುದಾಗಿ ದೂರಲಾಗಿದೆ.