ಕುಂದಾಪುರ, ಜ.06 (DaijiworldNews/AA): ರಿಯಲ್ ಟೈಮ್ ಸಿಸಿಟಿವಿ ಲೈವ್ ಮಾನಿಟರಿಂಗ್ ಮೂಲಕ ಅಕ್ರಮ ದನ ಸಾಗಾಟಕ್ಕೆ ತಡೆ ಒಡ್ಡಲಾದ ಘಟನೆ ಕುಂದಾಪುರದ ಬಿಜಾಡಿ ಜಂಕ್ಷನ್ ಬಳಿ ನಡೆದಿದೆ.

ಮುಂಜಾನೆ 3 ಗಂಟೆ ಸುಮಾರಿಗೆ ಕುಂದಾಪುರದ ಅಂಕದಕಟ್ಟೆಯಲ್ಲಿರುವ ಸೈನ್ ಇನ್ ಸೆಕ್ಯುರಿಟಿ ನಡೆಸುತ್ತಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಅನುಮಾನಾಸ್ಪದ ಚಟುವಟಿಕೆ ಸೆರೆಯಾಗಿದೆ. ಕೆಲ ವ್ಯಕ್ತಿಗಳು ರಸ್ತೆಬದಿಯಲ್ಲಿ ದನಗಳನ್ನು ಕಟ್ಟಿ ವಾಹನದಲ್ಲಿ ತುಂಬಿಸಲು ಪ್ರಯತ್ನಿಸುತ್ತಿರುವ ದೃಶ್ಯಗಳು ಕಂಡುಬಂದಿತ್ತು. ಲೈವ್ ಫೀಡ್ನಿಂದ ಎಚ್ಚೆತ್ತುಕೊಂಡ ಭದ್ರತಾ ಸಂಸ್ಥೆಯ ಸಿಬ್ಬಂದಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬೀಟ್ ಡ್ಯೂಟಿಗಾಗಿ ಅಧಿಕಾರಿಗಳು ಬೇರೆ ಮಾರ್ಗದಲ್ಲಿ ನಿಯೋಜನೆಗೊಂಡಿದ್ದರಿಂದ ಘಟನಾ ಸ್ಥಳಕ್ಕೆ ತಲುಪುವುದು ಸವಾಲಾಗಿತ್ತು. ಈ ವೇಳೆ ಪೊಲೀಸರು ಘಟನಾ ಸ್ಥಳದಲ್ಲಿನ ಮಾಹಿತಿಯನ್ನ ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದರು. ಪೊಲೀಸರು ಸ್ಥಳಕ್ಕಾಗಮಿಸುವ ವೇಳೆಗೆ ಕಳ್ಳಸಾಗಾಣಿಕೆದಾರರು ಜಾನುವಾರುಗಳನ್ನು ಬಿಟ್ಟು ತಮ್ಮ ವಾಹನದಲ್ಲಿ ಪರಾರಿಯಾಗಿದ್ದಾರೆ.
ಈ ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.