ಬಂಟ್ವಾಳ,ಜ.07(DaijiworldNews/TA): ಬೋಳಂತೂರು ಸಮೀಪದ ನಾರ್ಶ ಎಂಬಲ್ಲಿನ ಬೀಡಿ ಉದ್ಯಮಿ ಅವರ ಮನೆಗೆ ಇಡಿ ಅಧಿಕಾರಿಗಳ ಸೋಗಿನಲ್ಲಿ ಬಂದು ದರೋಡೆ ನಡೆಸಿದ ಪ್ರಕರಣ ಶೀಘ್ರವಾಗಿ ಪತ್ತೆ ಹಚ್ಚುವ ವಿಶ್ವಾಸವನ್ನು ಬಂಟ್ವಾಳ ಉಪವಿಭಾಗದ ಡಿ.ವೈ.ಎಸ್.ಪಿ.ವಿಜಯಪ್ರಸಾದ್ ತಿಳಿಸಿದ್ದಾರೆ.

ಮಂಗಳೂರು ಸಿಂಗಾರಿ ಬೀಡಿ ಮಾಲಕ ನಾರ್ಶ ನಿವಾಸಿ ಸುಲೈಮಾನ್ ಹಾಜಿ ಅವರ ಮನೆಗೆ ಜಾರಿ ನಿರ್ದೇಶನಾಲಯ ಅಧಿಕಾರಿಗಳ ವೇಷದಲ್ಲಿ ಬಂದ ಆರು ಮಂದಿ ದರೋಡೆಕೋರರಿಂದ ಲಕ್ಷಾಂತರ ರೂ ಹಣವನ್ನು ದೋಚಿದ ಪ್ರಕರಣ ಬೆನ್ನು ಹತ್ತಿದ ಪೋಲೀಸ್ ತಂಡ ಕೇರಳದಲ್ಲಿ ಬೀಡು ಬಿಟ್ಟಿದೆ ಎಂಬುದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಬಂಟ್ವಾಳ ಡಿ.ವೈ.ಎಸ್.ಪಿ.ವಿಜಯಪ್ರಸಾದ್ ನೇತ್ರತ್ವದಲ್ಲಿ ವಿಟ್ಲ ಠಾಣೆಯ ಪೋಲಿಸ್ ಇನ್ಸ್ ಪೆಕ್ಟರ್ ನಾಗರಾಜ್ ಅವರ ಮುಂದಾಳತ್ವದಲ್ಲಿ ಪುಂಜಾಲಕಟ್ಟೆ ಎಸ್.ಐ.ನಂದಕುಮಾರ್, ಬಂಟ್ವಾಳ ಗ್ರಾಮಾಂತರ ಎಸ್.ಐ.ಹರೀಶ್, ಬಂಟ್ವಾಳ ನಗರ ಪೋಲೀಸ್ ಠಾಣೆಯ ಎಸ್.ಐ.ರಾಮಕೃಷ್ಣ, ವಿಟ್ಲ ಠಾಣೆಯ ಎಸ್.ಐ.ಕೌಶಿಕ್ ಅವರ ನಾಲ್ಕು ತಂಡಗಳು ರಚನೆಯಾಗಿದ್ದು, ಅದರಲ್ಲಿ ಪರಿಣಿತ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದು ಕಳೆದ ಮೂರು ದಿನಗಳಿಂದ ಬೇರೆ ರೀತಿಯಲ್ಲಿ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ ಎಂದು ಹೇಳಲಾಗಿದೆ.
ತನಿಖೆಯ ದೃಷ್ಟಿಯಿಂದ ಮತ್ತು ಸೂಕ್ಷ್ಮ ವಿಚಾರವಾದ ಕಾರಣ ಪೋಲೀಸ್ ಕಾರ್ಯಚರಣೆಯ ಮಾಹಿತಿಯನ್ನು ನೀಡಲು ಮೇಲಾಧಿಕಾರಿಗಳು ನಿರಾಕರಣೆ ವ್ಯಕ್ತಪಡಿಸಿದ್ದು , ಅತೀ ಶೀಘ್ರವಾಗಿ ಕಳ್ಳತನ ಗ್ಯಾಂಗ್ ನ ಪತ್ತೆ ಹಚ್ಚವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಕಳವು ನಡೆದ ಜಾಗದಿಂದ ಹಿಡಿದು ಸುತ್ತಮುತ್ತಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಾಯವಾಗುವ ಎಲ್ಲಾ ಸಿ.ಸಿ.ಕ್ಯಾಮರಾಗಳ ಪೂಟೇಜ್ ಗಳ ಪರಿಶೀಲಿಸಿ ಮಹತ್ವದ ಸುಳಿವು ಲಭ್ಯವಾಗಬಹುದಾ? ಎಂಬ ನಿಟ್ಟಿನಲ್ಲಿ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಹೇಲಾಗುತ್ತಿದೆ.
ಜಿಲ್ಲೆಯಲ್ಲಿ ಹೊಸ ಪ್ರಕರಣ: ಪೊಲೀಸರಿಗೆ ಸವಾಲು ಸಿನಿಮಾಗಳಲ್ಲಿ ನೋಡಿದ ರೀತಿಯಲ್ಲಿ ನಾರ್ಶದ ಪ್ರಕರಣ ಕಂಡು ಬಂದರೂ ಕೂಡ ಪೊಲೀಸ್ ತಂಡಕ್ಕೆ ಇದೊಂದು ಚಾಲೆಂಜಿಂಗ್ ಹಾಗೂ ಹೊಸ ರೀತಿಯ ಪ್ರಕರಣವಾಗಿದೆ.
ಯಾಕೆಂದರೆ ದ.ಕ.ಜಿಲ್ಲೆಯಲ್ಲಿ ಈ ರೀತಿಯ ಪ್ರಕರಣ ಬಹುಶಃ ಇದೇ ಮೊದಲು. ಇಂತಹ ಪ್ರಕರಣಗಳಲ್ಲಿ ಕರ್ತವ್ಯ ನಿರ್ವಹಿಸಿ ಪ್ರಕರಣಗಳನ್ನು ಬೇಧಿಸುವ ಪೊಲೀಸ್ ತಂಡಕ್ಕೂ ಹೊಸ ರೀತಿಯ ಅನುಭವವಾಗಬಹುದು. ಟಿ.ಎನ್.ಮೂಲದ ವಾಹನ ಎಂಬುದು ಮನೆಯವರು ನೀಡಿದ ಮಾಹಿತಿಯಾಗಿದೆಯಾದರೂ ಅದು ಅಸಲಿಯಾಗಲು ಸಾಧ್ಯತೆ ಕಡಿಮೆ. ಅದು ಬಿಟ್ಟು ಯಾವುದೇ ಸುಳಿವು ಇಲ್ಲದ ವಿಶಿಷ್ಠವಾದ ಪ್ರಕರಣ ಹಿಂದೆ ಬಿದ್ದ ಪೋಲೀಸ್ ಇಲಾಖೆ ಆರೋಪಿಗಳ ಬೆನ್ನ ಹತ್ತಲು ಮಹತ್ವದ ಸಾಕ್ಷ್ಯಗಳನ್ನುಸುಳಿವುಗಳನ್ನು ಕಲೆಹಾಕುತ್ತಿದೆ. ಕಳೆದ ಬಾರಿ ವಿಟ್ಲ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಬ್ಯಾಂಕ್ ಒಂದರ ಕಳವು ಪ್ರಕರಣವನ್ನು ಬೇಧಿಸಿದ ಪೋಲೀಸ್ ತಂಡಕ್ಕೆ ಮತ್ತೆ ಪತ್ತೆ ಕಾರ್ಯದ ಜವಬ್ದಾರಿಯ ನ್ನು ವಹಿಸಲಾಗಿದೆ. ಇದೊಂದು ಚಾಲೆಂಜಿಂಗ್ ಪ್ರಕರಣದಂತೆ ಮೇಲ್ನೋಟಕ್ಕೆ ಕಾಣುತ್ತಿದ್ದು, ರಚನೆಯಾದ ಪೋಲಿಸ್ ತಂಡವು ಹುರುಪಿನಿಂದ ಕಾರ್ಯನಿರ್ವಹಿಸಿ ಪತ್ತೆ ಕಾರ್ಯದ ವಿಶ್ವಾಸದಲ್ಲಿದೆ.