ಮಂಗಳೂರು, ಜ.08 (DaijiworldNews/AA): ಏರ್ ಇಂಡಿಯಾ ಎಕ್ಸ್ಪ್ರೆಸ್ ಕಾರ್ಯಾಚರಣೆಯ ಕಾರಣಗಳನ್ನು ಉಲ್ಲೇಖಿಸಿ ಮಂಗಳೂರು-ಸಿಂಗಾಪುರ (ಚಾಂಗಿ) ವಿಮಾನ ಸಂಚಾರ ಕಾರ್ಯಾರಂಭ ಮುಂದೂಡಿ ಪರಿಷ್ಕೃತ ಪ್ರಕಟಣೆ ಹೊರಡಿಸಲಾಗಿದೆ.

ಏರ್ ಇಂಡಿಯಾ ಎಕ್ಸ್ಪ್ರೆಸ್ ಜನವರಿ 21ರಿಂದ ಮಂಗಳೂರು ಮತ್ತು ಸಿಂಗಾಪುರ ನಡುವೆ ವಿಮಾನ ಸಂಖ್ಯೆ IX862 ಮತ್ತು IX861 ವಾರಕ್ಕೆ ಎರಡು ಬಾರಿ ಕಾರ್ಯಾಚರಿಸಲಿದೆ ಎಂದು ಏರ್ಲೈನ್ ಈ ಹಿಂದೆ ತಿಳಿಸಿತ್ತು. ಈ ಮೂಲಕ ಮಂಗಳೂರಿನೊಂದಿಗೆ ವಿಮಾನ ಸಂಪರ್ಕವನ್ನು ಪಡೆಯುವ ಆಗ್ನೇಯ ಏಷ್ಯಾದ ಮೊದಲ ಅಂತಾರಾಷ್ಟ್ರೀಯ ತಾಣ ಎಂಬ ಹೆಗ್ಗಳಿಕೆಗೆ ಸಿಂಗಾಪುರ ಪಾತ್ರವಾಗಲಿದೆ. ಇನ್ನು ಈ ಸೇವೆಯನ್ನು ಕರಾವಳಿ ಪ್ರದೇಶದ ಪ್ರಯಾಣಿಕರಿಗೆ ಅಂತಾರಾಷ್ಟ್ರೀಯ ಸಂಪರ್ಕವನ್ನು ಹೆಚ್ಚಿಸಲು ಪ್ರಾರಂಭಿಸಲಾಗುತ್ತಿದೆ.
ಆರಂಭಿಕ ಯೋಜನೆಯ ಪ್ರಕಾರ, ವಿಮಾನ IX862 ಮಂಗಳೂರಿನಿಂದ ಬೆಳಗ್ಗೆ 5:55 ಕ್ಕೆ ಹೊರಟು ಮಧ್ಯಾಹ್ನ 1:25 ಕ್ಕೆ (ಸ್ಥಳೀಯ ಕಾಲಮಾನ) ಸಿಂಗಾಪುರ ತಲುಪುತ್ತಿತ್ತು. ಹಿಂದಿರುಗುವ ವಿಮಾನ IX861 ಸಿಂಗಾಪುರದಿಂದ ಮಧ್ಯಾಹ್ನ 2:25 ಕ್ಕೆ ಹೊರಡಲಿದ್ದು, ಸಂಜೆ 4:55 ಕ್ಕೆ ಮಂಗಳೂರಿಗೆ ಮರಳಲಿದೆ.
ಏರ್ಲೈನ್ ಸದ್ಯ ಮಂಗಳೂರು-ಸಿಂಗಾಪುರ ವಿಮಾನ ಸೇವೆಯನ್ನು ಮುಂದೂಡಲಿದೆ. ಇದರಿಂದಾಗಿ ಅಂತಾರಾಷ್ಟ್ರೀಯ ಸಂಪರ್ಕವನ್ನು ನಿರೀಕ್ಷಿಸುವ ಪ್ರಯಾಣಿಕರಿಗೆ ನಿರಾಶೆಯನ್ನುಂಟುಮಾಡಿದಂತಾಗಿದೆ. ಆದರೆ ವಿಮಾನಯಾನವು ಮಂಗಳೂರಿನಿಂದ ತನ್ನ ಸೇವೆಗಳನ್ನು ವಿಸ್ತರಿಸಲು ಬದ್ಧವಾಗಿದೆ.