ಮಂಗಳೂರು, ಜೂ10(Daijiworld News/SS): ಅಲೆಗಳ ಅಬ್ಬರ ತೀವ್ರವಾಗಿರುವ ಹಿನ್ನೆಲೆಯಲ್ಲಿ, ನಗರದ ಉಳ್ಳಾಲ, ಸೋಮೇಶ್ವರ, ಪಣಂಬೂರು ಸೇರಿದಂತೆ ಬೀಚ್ಗಳಲ್ಲಿ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿದ್ದು, ಮೀನುಗಾರರು ಕಡಲಿಗೆ ಇಳಿಯದಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಸೂಚನೆ ರವಾನಿಸಲಾಗಿದೆ.
ಕರಾವಳಿಯ ಸಮುದ್ರ ತೀರದಲ್ಲಿ ಗಾಳಿಯ ರಭಸ ಹೆಚ್ಚಿದ್ದು, ಈ ಹಿನ್ನೆಲೆಯಲ್ಲಿ ಸಮುದ್ರ ತೀರದಲ್ಲಿ ಭಾರಿ ಗಾತ್ರದ ಅಲೆಗಳು ಏಳಲಿವೆ. ಆದ್ದರಿಂದ ಮೀನುಗಾರರಿಗೆ ಸಮುದ್ರಕ್ಕೆ ತೆರಳದಂತೆ ಎಚ್ಚರಿಕೆ ನೀಡಲಾಗಿದೆ. ಅರಬ್ಬೀ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಇನ್ನಷ್ಟು ತೀವ್ರಗೊಂಡು ಚಂಡಮಾರುತವಾಗಿ ಪರಿವರ್ತನೆಗೊಂಡಿದೆ.
ಮಳೆಯ ನಿರೀಕ್ಷೆಯಲ್ಲಿದ್ದ ಕರಾವಳಿಯ ಜನರಲ್ಲಿ ಭೀತಿ ಮನೆ ಮಾಡಿದೆ. ಪರಿಣಾಮ ಲಕ್ಷದ್ವೀಪ, ಕೇರಳ, ಕರ್ನಾಟಕ, ಮಹಾರಾಷ್ಟ್ರ ಮತ್ತು ಗುಜರಾತ್ನಲ್ಲಿ ಭಾರೀ ಗಾಳಿ-ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಪ್ರಸ್ತುತ ನಿರ್ಮಾಣವಾಗಿರುವ ವಾಯುಭಾರ ಕುಸಿತ 36 ಗಂಟೆಗಳಲ್ಲಿ ಚಂಡಮಾರುತದ ಸ್ವರೂಪ ಪಡೆಯಲಿದ್ದು, ವಾಯವ್ಯ ದಿಕ್ಕಿನತ್ತ ಚಲಿಸಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಅರಬ್ಬೀ ಸಮುದ್ರದ ಮಧ್ಯಭಾಗದಿಂದ ನೈಋತ್ಯ ಲಕ್ಷದ್ವೀಪ ಭಾಗದಲ್ಲಿ ಕಡಿಮೆ ಒತ್ತಡ ಪ್ರದೇಶ ನಿರ್ಮಾಣವಾಗಿ ಚಂಡಮಾರುತವಾಗಿ ಪರಿವರ್ತನೆಯಾಗಿದೆ.
ಮುಂದಿನ 24 ಗಂಟೆಗಳಲ್ಲಿ ಕೇರಳ ಹಾಗೂ ಕರ್ನಾಟಕ ಕರಾವಳಿ ಪ್ರದೇಶಗಳಲ್ಲಿ ಭಾರಿ ಗಾಳಿ ಸಹಿತ ಮಳೆ ಬೀಳುವ ಸಾಧ್ಯತೆ ಇದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.