ಮಂಗಳೂರು,ಜ.09 (DaijiworldNews/AK): ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದು ನ್ಯಾಯಾಂಗ ಬಂಧನದಲ್ಲಿರುವ ಮೂಲ್ಕಿ ಕಂದಾಯ ನಿರೀಕ್ಷಕ ಜಿ.ಎಸ್.ದಿನೇಶ್ ಅವರ ಜಾಮೀನು ಅರ್ಜಿಯನ್ನು ಮಂಗಳೂರು ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯ ವಜಾಗೊಳಿಸಿದೆ.

ನ್ಯಾಯಾಧೀಶೆ ಸಂಧ್ಯಾ ಎಸ್ ಅರ್ಜಿಯನ್ನು ವಜಾಗೊಳಿಸಿ, ನ್ಯಾಯಾಂಗ ಬಂಧನವನ್ನು ವಿಸ್ತರಿಸಿದ್ದಾರೆ.2024ರ ಡಿಸೆಂಬರ್ 19ರಂದು 4 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಿನೇಶ್ ಅವರನ್ನು ಬಂಧಿಸಿದ್ದರು. ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಲೋಕಾಯುಕ್ತ ಸಂಸ್ಥೆಯ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ರವೀಂದ್ರ ಮುನ್ನಿಪ್ಪಾಡಿ ರವರು ವಾದಿಸಿದರು. ಆರೋಪಿತ ಅಧಿಕಾರಿಗೆ ನ್ಯಾಯಾಂಗ ಬಂಧನ ಮುಂದುವರಿದಿದೆ ಎಂಬುದಾಗಿ ಮಂಗಳೂರು ಲೋಕಾಯುಕ್ತ ವಿಭಾಗದ ಪೊಲೀಸ್ ಅಧೀಕ್ಷಕರಾದ ನಟರಾಜ ಎಂ.ಎ ರವರು ತಿಳಿಸಿದರು.
ಒಂದು ವರ್ಷಕ್ಕಿಂತ ಹೆಚ್ಚು ಕಾಲ ವಿಲೇವಾರಿಯಾಗದ ಕಡತವು ಲೋಕಾಯುಕ್ತ ಟ್ರ್ಯಾಪ್ ಕೇಸ್ ನಂತರ ಕೇವಲ 210 ರೂಪಾಯಿ ಗೆ ವಾರಸುದಾರರ ಹೆಸರನ್ನು ಸೇರಿಸುವ ವಿಷಯವನ್ನು ಪರಿಹರಿಸಿದ್ದಕ್ಕಾಗಿ ದೂರುದಾರರು ಲೋಕಾಯುಕ್ತರನ್ನು ಶ್ಲಾಘಿಸಿದರು. ನ್ಯಾಯಾಲಯದ ತೀರ್ಪಿನ ನಂತರ ಆರೋಪಿಯು ನ್ಯಾಯಾಂಗ ಬಂಧನದಲ್ಲಿದ್ದಾರೆ.