ಉಡುಪಿ, ಜೂ 10 (Daijiworld News/MSP): ಜೀವಕಳೆ ಇಲ್ಲದ ರಾಜ್ಯ ಸರ್ಕಾರವನ್ನು ಬಡಿದೆಬ್ಬಿಸಲು ಬಿಜೆಪಿ ಶಾಸಕರು ಜೂ. 14 ರಿಂದ ಹೋರಾಟ ನಡೆಸಲಿದ್ದಾರೆ ಎಂದು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಅವರು ಉಡುಪಿ ಜಿಲ್ಲಾಧಿಕಾರಿಗಳ ಕಚೇರಿಯ ಸಮುಚ್ಚಯದಲ್ಲಿ ಜೂನ್ 10 ರ ಸೋಮವಾರ ತಮ್ಮ ನೂತನ ಕಚೇರಿ ಉದ್ಘಾಟನೆಯ ವೇಳೆ ಮಾಧ್ಯಮದೊಂದಿಗೆ ಪ್ರತಿಕ್ರಿಯಿಸಿ ಮಾತನಾಡಿದರು.
ಚಲನೆ ಇಲ್ಲದಂತಿರುವ ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ ಶಾಸಕರು ಒಗ್ಗಟ್ಟಾಗಿ ಜೂನ್ 14 ರ ಬಳಿಕ ಹೋರಾಡಲಿದ್ದೇವೆ. ರಾಜ್ಯ ಸರ್ಕಾರ ತಕ್ಷಣ ರಾಜ್ಯ ಜನತೆಯ ಸಮಸ್ಯೆಗೆ ಸ್ಪಂದಿಸಿಲಿ , ಕೆಲಸ ಮಾಡುವ ಶಕ್ತಿ ಇಲ್ಲವೆಂದಾದರೆ ರಾಜ್ಯ ಸರ್ಕಾರ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ. ಅಲ್ಲಿಯವರೆಗೆ ಯಾವುದೇ ಕಾರಣಕ್ಕೂ ಬಿಜೆಪಿ ವಿಶ್ರಮಿಸುವುದಿಲ್ಲ ಎಂದು ರಾಜ್ಯ ಸರ್ಕಾರದ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಮಾತನಾಡಿದ ಅವರು, 'ರಾಜ್ಯ ಸರ್ಕಾರದ ಶವ ಪೆಟ್ಟಿಗೆಗೆ ಕೊನೆಯ ಮುಳ್ಳು ಹೊಡೆದಂತಾಗಲಿದೆ. ಈ ಸರ್ಕಾರದಲ್ಲಿ ಯಾವುದೂ ನೆಟ್ಟಗಿಲ್ಲ. ರಾಮಲಿಂಗ ರೆಡ್ಡಿ, ರೋಷನ್ ಬೇಗ್, ಸೋಮಶೇಖರ್ ವಿರೋಧ ಮಾಡಿದ್ದಾರೆ. ವಿಶ್ವನಾಥ್ ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸವೇ ಆಗುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕರೇ ದೂರುತ್ತಿದ್ದಾರೆ. ಮೈತ್ರಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ನಂತರ ಸಮಸ್ಯೆ ಬಗೆಹರಿಯುವುದು ಬಿಟ್ಟು ಉಲ್ಬಣವಾಗುತ್ತದೆ. ಅದಕ್ಕಾಗಿ ನಾವು ಕಾದು ನೋಡುತ್ತಿದ್ದೇವೆ ಎಂದು ವ್ಯಂಗ್ಯವಾಡಿದರು.
ಕಳೆದ ಐದು ವರ್ಷಗಳಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ , ಅತಿವೃಷ್ಟಿ ಅನಾವೃಷ್ಟಿ ನಿರ್ವಹಣೆಗೆಂದು 7182 ಕೋಟಿ ರಾಜ್ಯ ಸರ್ಕಾರಕ್ಕೆ ಅನುದಾನ ನೀಡಿದೆ. ಆದರೆ ರಾಜ್ಯ ಸರ್ಕಾರ ಯಾವುದೇ ಕೆಲಸ ಮಾಡುತ್ತಿಲ್ಲ. ರಾಜ್ಯದಲ್ಲಿ ಸರ್ಕಾರ ಇದೆ, ಆದ್ರೆ ಅದು ಬದುಕಿದೆ ಎಂದು ಅನಿಸುತ್ತಿಲ್ಲ. ಯುಪಿಎ ಸರ್ಕಾರ 10 ವರ್ಷಗಳಲ್ಲಿ ಕೇವಲ ನಾಲ್ಕು ಸಾವಿರ ಕೋಟಿ ನೀಡಿತ್ತು. ದೊಡ್ಡ ಪ್ರಮಾಣದ ಅನುದಾನ ನೀಡಿಯೂ ರಾಜ್ಯದ ಸ್ಪಂದನ ಶೂನ್ಯ ಎಂದು ಸಂಸದೆ ಶೋಭಾ ಕೆರಂದ್ಲಾಜೆ ಆರೋಪಿಸಿದರು.
ಇದೇ ವೇಳೆ 'ಕಾರ್ನಾಡ್ ನಿಧನಕ್ಕೆ ಸಂತಾಪ ಸೂಚಿಸಿದರು. ಕನ್ನಡ ನಾಡಿನ ಪುತ್ರ ಇಂದು ನಮ್ಮ ಜೊತೆಗಿಲ್ಲ. ಬಿಜೆಪಿ ಸಂತಾಪ ವ್ಯಕ್ತಪಡಿಸುತ್ತೆ ಎಂದರು.
ಸಂಸದರ ಕಚೇರಿಯನ್ನು ಪಕ್ಷದ ಹಿರಿಯರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ್ ಬಾಬು, ಮೀನುಗಾರಿಕಾ ಫೆಡರೇಷನ್ ಅಧ್ಯಕ್ಷರಾದ ಯಶ್ಪಾಲ್ ಸುವರ್ಣ ಹಾಗೂ ಪಕ್ಷದ ವಿವಿಧ ಜವಾಬ್ಧಾರಿಯ ನಾಯಕರು ಭಾಗವಹಿಸಿದ್ದರು