ಗಂಗೊಳ್ಳಿ, ಜ.09 (DaijiworldNews/AA): ಮೀನುಗಾರಿಕೆ ನಡೆಸುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರಕ್ಕೆ ಬಿದ್ದು ನಾಪತ್ತೆಯಾದ ಮೀನುಗಾರನ ಬಗ್ಗೆ 6 ದಿನ ಕಳೆದರೂ ಇನ್ನೂ ಯಾವುದೇ ಸುಳಿವು ದೊರೆತಿಲ್ಲ.

ಗಂಗೊಳ್ಳಿ ಸಮೀಪದ ಸಮುದ್ರದಲ್ಲಿ ಸರ್ವಮಂಗಳ ಬೋಟಿನಲ್ಲಿ ಜ. 2ರಂದು ಸಂಜೆ ಮೀನುಗಾರಿಕೆಯಲ್ಲಿದ್ದಾಗ ಆಕಸ್ಮಿಕವಾಗಿ ನಾರಾಯಣ ಮೊಗವೀರ (58) ಅವರು ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿದ್ದರು.
ಆ ದಿನ ಇತರ ಮೀನುಗಾರರು ಬೋಟ್ಗಳಲ್ಲಿ ಹುಡುಕಾಡಿದ್ದರೂ ನಾರಾಯಣ ಅವರ ಬಗ್ಗೆ ಯಾವ ಸುಳಿವು ದೊರೆತಿರಲಿಲ್ಲ. ಕಳೆದ 5-6 ದಿನಗಳಿಂದಲೂ ಗಂಗೊಳ್ಳಿಯ ಪರ್ಶಿನ್ ಬೋಟ್ಗಳು, ಮನೆಯವರು, ಕರಾವಳಿ ಕಾವಲು ಪಡೆ ಪೊಲೀಸರು, ಗಂಗೊಳ್ಳಿ ಠಾಣಾ ಪೊಲೀಸರು, ಮುಳುಗು ತಜ್ಞ ದಿನೇಶ್ ಖಾರ್ವಿ ಮತ್ತು ಇತರರು ನಿರಂತರ ಹುಡುಕಾಟ ನಡೆಸಿದರೂ ನಾರಾಯಣ ಅವರು ಪತ್ತೆಯಾಗಿಲ್ಲ.
ಇನ್ನು ನಾರಾಯಣ ಅವರ ಬಗ್ಗೆ ಏನಾದರೂ ಸುಳಿವು ಸಿಕ್ಕಿದರೆ ಕೂಡಲೇ ಗಂಗೊಳ್ಳಿ ಪೊಲೀಸರು, ಕರಾವಳಿ ಕಾವಲು ಪಡೆ ಪೊಲೀಸರಿಗೆ ಮಾಹಿತಿ ನೀಡಬೇಕಾಗಿ ಕುಟುಂಬದವರು ಮನವಿ ಮಾಡಿಕೊಂಡಿದ್ದಾರೆ.