ಮಂಗಳೂರು, ಜ.09 (DaijiworldNews/AA): ಕರಾವಳಿ ಭಾಗದಲ್ಲಿ ಕಳೆದ ಎರಡು-ಮೂರು ದಿನಗಳಿಂದ ವಿಶೇಷವಾಗಿ ಬೆಳಗಿನ ಜಾವದಲ್ಲಿ ಚಳಿ ಗಮನಾರ್ಹವಾಗಿ ಹೆಚ್ಚಾಗಿದೆ. ಮಂಗಳೂರು ನಗರ ವ್ಯಾಪ್ತಿಯಲ್ಲಿ ಮುಂಜಾನೆ ತಾಪಮಾನ 20 ರಿಂದ 21 ಡಿ.ಸೆ. ಆಸುಪಾಸಿನಲ್ಲಿರುತ್ತದೆ. ಆದರೆ ಗ್ರಾಮಾಂತರ ಪ್ರದೇಶದಲ್ಲಿ ಇನ್ನೂ 1-2 ಡಿ.ಸೆ. ನಷ್ಟು ಇಳಿಕೆಯಾಗುತ್ತಿದೆ.

ಪ್ರಸ್ತುತ ಮಳೆಯ ಯಾವುದೇ ಲಕ್ಷಣಗಳಿಲ್ಲದೆ ಆಕಾಶವು ಸ್ಪಷ್ಟವಾಗಿದೆ. ರಾತ್ರಿ ಇಬ್ಬನಿಯೂ ಬೀಳುತ್ತಿದ್ದು, ಗ್ರಾಮೀಣ ಭಾಗದಲ್ಲಿ ಮುಂಜಾನೆ ಮಂಜು ಕೂಡ ಕವಿದಿರುತ್ತಿದೆ. ಬೆಳಗ್ಗೆ 8-9 ಗಂಟೆಯವರೆಗೂ ಚಳಿ ಅನುಭವವಿರುತ್ತದೆ.
ಈ ಹವಾಮಾನ ಮಾದರಿಯು ಇನ್ನೂ ಕೆಲವು ದಿನಗಳವರೆಗೆ ಮುಂದುವರೆಯಲಿದೆ. ಜನವರಿ 15ರ ನಂತರ ಏರಿಳಿತವಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ಉತ್ತರ ಕನ್ನಡ ಜಿಲ್ಲೆ ಸಹಿತ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿ ಶೀತ ಗಾಳಿ ಬೀಸಲಿದೆ ಎಂದು ಐಎಂಡಿ ಎಚ್ಚರಿಸಿದೆ. ಕನಿಷ್ಠ ತಾಪಮಾನ ವಾಡಿಕೆಗಿಂತ ಇನ್ನೂ 2-4 ಡಿ.ಸೆ. ವರೆಗೆ ಕಡಿಮೆಯಾಗುವ ಸಾಧ್ಯತೆಯಿದೆ. ಇದು ಕರಾವಳಿ ಪ್ರದೇಶದ ಮೇಲೆ ಪರಿಣಾಮ ಬೀರಬಹುದು. ಕರಾವಳಿಯಲ್ಲೂ ತಾಪಮಾನ ಮತ್ತಷ್ಟು ಕಡಿಮೆಯಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರಾವಳಿ ಪ್ರದೇಶದಲ್ಲಿ ಮುಂಜಾನೆ ಮತ್ತು ಸಂಜೆ ಚಳಿಯ ವಾತಾವರಣವಿದ್ದರೆ, ಮಧ್ಯಾಹ್ನನದ ವೇಳೆಗೆ ಬಿಸಿಲ ಝಳದಿಂದ ಉರಿ ಸೆಕೆ ಅನುಭವವಾಗುತ್ತಿದೆ. ಇದರೊಂದಿಗೆ ಗಾಳಿಯಲ್ಲಿ ತಣ್ಣನೆಯ ಅನುಭವವೂ ಉಂಟಾಗುತ್ತದೆ. ಪುನಃ ಸಂಜೆ ವೇಳೆಗೆ ಚಳಿ ಆರಂಭವಾಗುತ್ತದೆ.