ಮಂಗಳೂರು,ಜ.09 (DaijiworldNews/AK):ನಗರದ ವಾಮಂಜೂರಿನ ಸೆಕೆಂಡ್ ಸೇಲ್ ಮಳಿಗೆಯಲ್ಲಿ ನಡೆದಿದ್ದ ಗನ್ ಫೈರ್ ಪ್ರಕರಣ ಇದೀಗ ಹೊಸ ಟ್ವಿಸ್ಟ್ ಪಡೆದಿದೆ.

ಈ ಬಗ್ಗೆ ಮಂಗಳೂರು ಕಮಿಷನರ ಅನುಪಮ್ ಅಗರ್ವಾಲ್ ಪ್ರತಿಕ್ರಿಯಿಸಿ, ತಮಗೆ ಬಜ್ಪೆಯ ಭಾಸ್ಕರ್ ಎಂಬವರ ಗನ್ ನಿಂದ ಸ್ವತಃ ಸಫ್ವಾನ್ ಎಂಬವರೇ ಆಟಿಕೆ ಎಂದು ಭಾವಿಸಿ ಫೈರ್ ಮಾಡಿಕೊಂಡು ಗಾಯಗೊಂಡಿರುವುದಾಗಿ ಮಾಹಿತಿ ಸಿಕ್ಕಿತ್ತು. ಆದ್ರೆ ಪೊಲೀಸರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುವ ಪ್ರಯತ್ನ ನಡೆದಿರುವ ಬಗ್ಗೆ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಸಿಸಿ ಕ್ಯಾಮಾರ ಫೂಟೇಜ್ ಗಳನ್ನು ಕೂಡಾ ಪರಿಶೀಲಿಸಿದಾಗ ಸೆಕೆಂಡ್ ಸೇಲ್ ಮಳಿಗೆಯ ಓನರ್ ಬದ್ರುದ್ದೀನ್ ಎಂಬ ವ್ಯಕ್ತಿಯೇ ಫೈರ್ ಮಾಡಿರುವುದಾಗಿ ಸಾಬೀತಾಗಿದೆ. ಎದುರುಪ್ದವು ಮಸೀದಿಯ ಧರ್ಮಗುರು ಸಫ್ವಾನ್(25 ) ಎಂಬವರಿಗೆ ಗಾಯವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ, ಸೆಕೆಂಡ್ ಸೇಲ್ ಮಳಿಗೆಯನ್ನು ಹೊಂದಿದ್ದ ಬಬ್ರುದ್ದೀನ್ ಒಬ್ಬ ರೌಡಿ ಶೀಟರ್ ಚರಣ್ ರಾಜ್ ಕೊಲೆ ಸೇರಿದಂತೆ ನಾನಾ ಪ್ರಕರಣದ ಆರೋಪಿ ಎನ್ನುವ ಮಾಹಿತಿ ಕೂಡ ತನಿಖೆಯ ವೇಳೆಗೆ ಬಯಲಾಗಿದೆ.
ಇನ್ನು ಸಫ್ವಾನ್ ಅವರಿಗೆ 10 ಸಾವಿರ ರೂ. ನಗದು ಅವಶ್ಯಕತೆ ಇದ್ದ ಕಾರಣ ಗೂಗಲ್ ಪೇ ಮಾಡಿ ಕ್ಯಾಶ್ ಪಡೆದುಕೊಳ್ಳುವ ಉದ್ದೇಶದಿಂದ ಬಬ್ರುದ್ದೀನ್ ಎಂಬ ವ್ಯಕ್ತಿಯ ಅಂಗಡಿಗೆ ಬಂದಿದ್ರು. ಶಾಪ್ ನಲ್ಲಿ ತನ್ನ ಪಿಸ್ತೂಲ್ ಹಿಡಿದು ಮಾತನಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಟ್ರಿಗರ್ ಅನ್ನು ಒತ್ತಿದ್ದರಿಂದ ಸಫ್ವಾನ್ಗೆ ಗುಂಡು ತಗುಲಿರುವುದಾಗಿದೆ. ಅಕ್ರಮವಾಗಿ ಗನ್ ಹೊಂದಿದ್ದರಿಂದ ಈ ವಿಚಾರವನ್ನು ಮುಚ್ಚಿಡುವ ಯತ್ನ ಇಲ್ಲಿ ನಡೆದಿದೆ.
ಭಾಸ್ಕರ್ ಎಂಬವರ ಗನ್ ಎಂಬುದಾಗಿ ಮಾಹಿತಿ ನೀಡಿದ್ರು ಆದರೆ ಪೊಲೀಸರು ಭಾಸ್ಕರ್ ಅವರನ್ನು ವಿಚಾರಿಸಿದಾಗ ತನ್ನದೇ ಗನ್ ಎಂಬುದಾಗಿ ಸುಳ್ಳು ಹೇಳುವಂತೆ ಒತ್ತಾಯಿಸಿದರು. ಆದ್ರೆ ಅದು ನನ್ನ ಗನ್ ಅಲ್ಲ ಎಂಬುದಾಗಿ ಹೇಳಿಕೊಂಡಿದ್ದಾರೆ. ಇನ್ನು ಈ ಗನ್ ಕೇರಳ ಮೂಲದ ಇಮ್ರಾನ್ ಎಂಬಾತ ಬಬ್ರುದ್ದೀನ್ ಗೆ ನೀಡಿದ್ದ ಪಿಸ್ತೂಲ್ ಇದಾಗಿದೆ ಎಂಬುದಾಗಿ ಕಮಿಷನರ್ ಮಾಹಿತಿಯನ್ನು ನೀಡಿದ್ದಾರೆ.