ಮಂಗಳೂರು, ಜ.09 (DaijiworldNews/AK): ಡ್ರಗ್ಸ್ ಫ್ರಿ ಮಂಗಳೂರು ಮಾಡುವ ನಿಟ್ಟಿನಲ್ಲಿ ಮಂಗಳೂರು ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಗೋವಾದಿಂದ ಮಂಗಳೂರು ನಗರಕ್ಕೆ ಹಾಗೂ ಕೇರಳಕ್ಕೆ ರಾಜ್ಯಕ್ಕೆ ಮಾದಕ ವಸ್ತುವಾದ ಹೈಡ್ರೋವಿಡ್ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿ ಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕೇರಳದ ಪ್ರಮುಖ ಮಾದಕ ವಸ್ತು ಪೂರೈಕೆದಾರ ಶಮೀರ್ ಪಿ ಕೆ (42) ಎಂಬಾತನನ್ನು ಮಂಗಳೂರು ನಗರ ಅಪರಾಧ ವಿಭಾಗದ ಪೊಲೀಸರು (ಸಿಸಿಬಿ) ಬಂಧಿಸಿದ್ದಾರೆ. ಅಧಿಕಾರಿಗಳು ಕಾರ್ಯಾಚರಣೆಯಲ್ಲಿ 73 ಲಕ್ಷ ರೂಪಾಯಿ ಮೌಲ್ಯದ 738 ಗ್ರಾಂ ಮಾದಕವಸ್ತು ಮತ್ತು ಇತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.



ಬಪ್ಪನಾಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರೊಂದು ಅಕ್ರಮ ಮಾದಕ ದ್ರವ್ಯ ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ವಾಹನವನ್ನು ಅಡ್ಡಗಟ್ಟಿದಾಗ, ಅವರು ಹೈಡ್ರೋವಿಡ್ ಗಾಂಜಾ ಸಾಗಿಸುತ್ತಿರುವುದು ಪತ್ತೆಯಾಗಿದೆ. ಆತನ ವಶದಿಂದ 73 ಲಕ್ಷ ರೂಪಾಯಿ ಮೌಲ್ಯದ 738 ಗ್ರಾಂ ಹೈಡ್ರೋವಿಡ್ ಗಾಂಜಾ, ಸಾಗಾಟಕ್ಕೆ ಉಪಯೋಗಿಸಿದ KL-76-B-2296 ನೊಂದಣಿ ನಂಬ್ರದ ಕೆಂಪು ಬಣ್ಣದ ಹುಂಡೈ ಕಂಪೆನಿಯ ಕಾರು, ಮೊಬೈಲ್ ಫೋನ್ ನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯಿಂದ ವಶಪಡಿಸಿಕೊಂಡ ಸೊತ್ತಿನ ಮೌಲ್ಯ. 80,10,000 ರೂ. ಆಗಬಹುದು.
ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯ 80.1 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಗಾಂಜಾವನ್ನು ವಿದೇಶದಿಂದ ದೇಶಕ್ಕೆ ಕಳ್ಳಸಾಗಣೆ ಮಾಡಲಾಗಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಕುರಿತು ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಸಿಬಿ ಎಸಿಪಿ ಮನೋಜ್ ಕುಮಾರ್ ನಾಯಕ್ ನೇತೃತ್ವದಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಐಪಿಎಸ್ ಮತ್ತು ಉಪ ಪೊಲೀಸ್ ಆಯುಕ್ತರಾದ ಸಿದ್ಧಾರ್ಥ್ ಗೋಯಲ್ ಐಪಿಎಸ್ ಮತ್ತು ಕೆ ರವಿಶಂಕರ್ ಕೆಎಸ್ಪಿಎಸ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಯಿತು.ಈ ಪ್ರದೇಶದಲ್ಲಿ ಮಾದಕ ದ್ರವ್ಯ ಸಾಗಾಟದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಪ್ರತಿಜ್ಞೆ ಮಾಡಿದ್ದಾರೆ.