ಬಂಟ್ವಾಳ,ಜ.09 (DaijiworldNews/AK): ಬ್ಯಾಂಕಿನ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿ ಹಾಗೂ ಆಡಳಿತ ಮಂಡಳಿಯ ತೇಜೋವಧೆ ಮಾಡುವ ದುರುದ್ದೇಶದಿಂದ ವ್ಯಕ್ತಿಯೋರ್ವರು ಸುಳ್ಳು ನಮ್ಮ ಬ್ಯಾಂಕ್ ವಿರುದ್ಧ ಅಪಪ್ರಚಾರಗಳನ್ನು ಮಾಡುತ್ತಿದ್ದಾರೆ ಎಂದು ಬಂಟ್ವಾಳ ಸಮಾಜ ಸೇವಾ ಸಹಕಾರಿ ಸಂಘ ನಿಯಮಿತ ಇದರ ಅಧ್ಯಕ್ಷ ಸುರೇಶ್ ಕುಲಾಲ್ ಆರೋಪಿಸಿದ್ದಾರೆ.

ಅವರು ಇಂದು ಬ್ಯಾಂಕಿನ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಈ ಹೇಳಿಕೆ ನೀಡಿದ್ದಾರೆ.ಫೆ. 9 ರಂದು ನಡೆಯುವಂತಹ ಆಡಳಿತ ಮಂಡಳಿ ಚುನಾವಣೆ ಯ ದೃಷ್ಟಿಯಿಂದ ಸುಳ್ಳು ದಾಖಲೆಗಳನ್ನು ಸಂಗ್ರಹಿಸಿ ಬ್ಯಾಂಕಿಗೆ ನಷ್ಟವುಂಟುಮಾಡುವ ಮತ್ತು ಆಡಳಿತ ಮಂಡಳಿಯ ತೇಜೋವಧೆ ಮಾಡುವ ದುರುದ್ದೇಶದಿಂದ ಸೆನ್ ಪೋಲೀಸ್ ಠಾಣೆಯಲ್ಲಿ ಘಟನೆಗೆ ಸಂಬಂಧ ಪಡದ ವ್ಯಕ್ತಿಗಳ ವಿರುದ್ಧ ಸುಳ್ಳು ಆಪಾದನೆಗಳನ್ನು ಮಾಡಿ ದೂರು ಸಲ್ಲಿಸಿದ್ದಾರೆ.
ಈ ದೂರಿನ ಬಗ್ಗೆ ಕಾನೂನು ಬಾಹಿರ ಎಂಬ ಪ್ರಾಥಮಿಕ ಹಂತದ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ ಎಂದು ಅವರು ತಿಳಿಸಿದರು.ಸಂಘವು ತನ್ನ ಸದಸ್ಯರಿಗೆ ವಿವಿಧ ರೀತಿಯ ಸಾಲ ಸೌಲಭ್ಯವನ್ನು ಒದಗಿಸುತ್ತಿದ್ದು, ಸ್ವಂತ ಉದ್ಯೋಗ ಕಲ್ಪಿಸಲು ಸಣ್ಣ ಕೈಗಾರಿಕೆಗಳಿಗೆ, ಗುಡಿಕೈಗಾರಿಕೆಗಳಿಗೆ, ವ್ಯಾಪಾರ ವ್ಯವಹಾರಗಳಿಗೆ ಸಾಲ ನೀಡಲಾಗುತ್ತಿದೆ. ಚಿನ್ನಾಭರಣಗಳ ಈಡಿನ ಮೇಲೆ ಸಾಲ ಸೌಲಭ್ಯ ಒದಗಿಸಲಾಗುತ್ತಿದೆ. ಬ್ಯಾಂಕಿನ ಈ ಸೌಲಭ್ಯಗಳನ್ನು ಸದಸ್ಯರ ಅನುಕೂಲತೆಗಾಗಿ ಕಲ್ಪಿಸಲಾಗುತ್ತಿದೆ.